ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಪ್ರಥಮ ಸ್ಥಾನವಿದೆ. ಗುರುಗಳು ಜನರಲ್ಲಿ ಆವರಿಸಿರುವ ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವ ಗುರುವಿಗೆ ನಮಃ.
ಗುರುವಿನಷ್ಟು ಹಿರಿಯದಾದುದು ಬೇರಾವುದೂ ಇಲ್ಲ. ಮಾತೃದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ ಎನ್ನುವಂತೆ ಆಚಾರ್ಯರನ್ನು ದೇವರಿಗೆ ಸಮಾನವೆಂದೇ ಪರಿಗಣಿಸಲಾಗಿದೆ.ಪುರಂದರದಾಸರು ಹೇಳಿದೆ ಹಾಗೆ ” ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ” ಯಾವುದೇ ವಿದ್ಯೆ ಫಲಪ್ರದವಾಗಬೇಕಾದರೆ ಗುರುಕೃಪೆ , ಆಶೀರ್ವಾದ ಬೇಕೇ ಬೇಕು. ಯಾಕೆಂದರೆ ಗುರುಕೊಟ್ಟ ವಿದ್ಯೆಯೇ ಸಂಪತ್ತು, ಗುರು ನೀಡುವ ಸಂಪತ್ತು ಕಳೆದುಹೋಗದು. ಗುರುಗಳು ಜನರಿಗೆ ಮಾತ್ರವಲ್ಲದೆ ದೇವತೆಗಳಿಗೂ ಇದ್ದರು ಎನ್ನುವುದನ್ನು ಪುರಾಣಗಳಿಂದ ಓದಿದ್ದೇವೆ. ಶ್ರೀರಾಮಚಂದ್ರನಿಗೆ ವಸಿಷ್ಠ ಮಹರ್ಷಿಗಳಿದ್ದಂತೆ ಎಲ್ಲಾ ರಾಜ ಮಹಾರಾಜರಿಗೂ ರಾಜಗುರುಗಳಿದ್ದರು.
ಲೌಕಿಕ ವಿದ್ಯೆಯನ್ನು ನೀಡಿದ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯ. ಹೀಗಾಗಿ ಎಲ್ಲ ಗುರುಗಳನ್ನೂ ಆರಾಧಿಸುವ ದಿನವೇ ಗುರುಪೂರ್ಣಿಮೆ.
ಗುರುಪೂರ್ಣಿಮೆ ಕೇವಲ ವೈದಿಕ ಸಂಪ್ರದಾಯಕ್ಕಷ್ಟೇ ಅಲ್ಲದೇ ಜೈನ, ಬೌದ್ಧ ಮುಂತಾದ ಎಲ್ಲ ಪಂಥದವರೂ ಗುರು ಪೂರ್ಣಿಮೆಯನ್ನು ಆಚರಿಸುವುದುಂಟು.
ಸಿದ್ಧಾರ್ಥನಾಗಿದ್ದವನು ಬುದ್ಧನಾಗಿ ಮೊದಲ ಧರ್ಮ ಪ್ರವಚನವನ್ನೂ ನೀಡಿದ ದಿನವೇ ಆಷಾಢಹುಣ್ಣಿಮೆ.ಬುದ್ಧ ಜಗತ್ತಿನ ದುಃಖದ ಮೂಲವನ್ನು ಕಂಡುಹಿಡಿದು ಅದನು ಹೋಗಲಾಡಿಸುವ ದಾರಿಯನ್ನೂ ಸೂಚಿಸಿದವನು.ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ.
ಈ ದಿನ ಗೌತಮ ಬುದ್ಧನು ಉತ್ತರ ಪ್ರದೇಶದ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ.
ಜೈನ ಧರ್ಮದಲ್ಲಿ ಗುರು ಪೂರ್ಣಿಮೆಯನ್ನು, ಭಗವಾನ್ ಮಹಾವೀರ ಅವರು ಗೌತಮ ಸ್ವಾಮಿಯನ್ನು ತಮ್ಮ ಪ್ರಥಮ ಶಿಷ್ಯನನ್ನಾಗಿ ಸ್ವೀಕರಿಸಿದ ದಿನವೆಂದು ಆಚರಿಸಲಾಗುತ್ತದೆ.
ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ.
ಕೃಷಿಕರಿಗೆ ಈ ದಿನವು ಅತ್ಯಂತ ಪವಿತ್ರ. ಏಕೆಂದರೆ ಈ ದಿನವನ್ನು ಮಳೆಯ ಆಗಮನದ ದಿನವೆಂದು ಪರಿಗಣಿಸಲಾಗುತ್ತದೆ.
‘ವೇದವ್ಯಾಸ’ ಸಾಂಕೇತಿಕಾರ್ಥವುಳ್ಳ ರಹಸ್ಯಪೂರ್ಣ ವ್ಯಕ್ತಿತ್ವದ ಮಾಂತ್ರಿಕ. ಅವರು ಆಧ್ಯಾತ್ಮ, ಇತಿಹಾಸ, ಜ್ಞಾನ, ವಿಜ್ಞಾನಗಳ ಕಣಜವಾಗಿದ್ದರು. ವ್ಯಾಸ ಮಹರ್ಷಿ ಎಂದು ಪ್ರಸಿದ್ಧರಾದ ಕೃಷ್ಣ ದ್ವೈಪಾಯನರು ವೇದಾಧ್ಯಯನಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾದದ್ದು.ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ, ತಮ್ಮ ಕಾಲದಲ್ಲಿ ಪ್ರಚಲಿತವಾಗಿದ್ದ ವೇದಮಂತ್ರಗಳನ್ನು ಯಜ್ಞಕಾರ್ಯಗಳಿಗೆ ಅನ್ವಯವಾಗುವಂತೆ ಬೋಧಿಸಿದರು. ವೇದಮಂತ್ರಗಳನ್ನು ಪರಿಷ್ಕರಿಸಿ ನಾಲ್ಕು ವೇದಗಳಾಗಿ ವಿಂಗಡಿಸಿದರು.ಮತ್ತು ಪುರಾಣಗಳ ಒಟ್ಟು ಸಂಖ್ಯೆ 18 ಆಗಿದೆ. ಆದರೆ, ಈ ಎಲ್ಲಾ 18 ಪುರಾಣಗಳನ್ನು ರಚಿಸಿದವರು ಮಹರ್ಷಿ ವೇದವ್ಯಾಸರು ಎನ್ನಲಾಗುತ್ತದೆ.
ಈ ಗುರು ಪೂರ್ಣಿಮಾ ದಿವಸದಂದು ಚಾತುರ್ಮಾಸ್ಯ ವ್ರತವನ್ನು ಮಹಾಗುರು ವ್ಯಾಸರ ಪೂಜೆಯಿಂದ ಪ್ರಾರಂಭಿಸುತ್ತಾರೆ. ನಾಲ್ಕು ತಿಂಗಳು ನಡೆದು ಕಾರ್ತಿಕ ಪೂರ್ಣಿಮೆಯಂದು ವ್ರತ ಮುಕ್ತಾಯವಾಗುತ್ತದೆ. ಈ ಚಾತುರ್ಮಾಸ್ಯ ವ್ರತವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸುವವರಿಗೆ ಸಮೃದ್ಧ ಆಹಾರ, ಸೌಂದರ್ಯ, ಸದ್ಬುದ್ಧಿ, ಸತ್ಸಂತಾನ ದೊರೆಯುವುದೆಂಬ ನಂಬಿಕೆಯಿದೆ. ಈ ದಿವಸವೇ ವೇದವ್ಯಾಸರು ಬ್ರಹ್ಮ ಸೂತ್ರ ಬರೆಯಲು ಪ್ರಾರಂಭಿಸಿದ್ದು, ಏಕಲವ್ಯನು ಗುರು ದ್ರೋಣಾಚಾರ್ಯರಿಗೆ ಗುರು ಕಾಣಿಕೆಯಾಗಿ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿಕೊಟ್ಟಿದ್ದು ಗುರು ಪೂರ್ಣಿಮಾ ದಿವಸ
ಗುರು ಶಿಷ್ಯರ ಸಂಬಂಧದ ಬಗೆಗೆ ವ್ಯಾಪಕ ಉಲ್ಲೇಖ ನಮ್ಮ ದೇಶದ ಪ್ರಾಚೀನ ಸಾಹಿತ್ಯದಲ್ಲಿ ಗುರು ಶಿಷ್ಯರ ಸಂಬಂಧದ ಬಗೆಗೆ ವ್ಯಾಪಕ ಉಲ್ಲೇಖಗಳು ಬರುತ್ತವೆ. ಗುರುವಿನ ಪದತಲದಲ್ಲಿ ಭಕ್ತಿಯಿಂದ ಕುಳಿತು ಕಲಿಯಬೇಕು. ಆದರೆ ಅವರು ಹೇಳಿದ್ದನ್ನೆಲ್ಲಾ ಕುರುಡಾಗಿ ನಂಬಬಾರದು. ಅವರು ಹೇಳಿದ್ದನ್ನು ಪ್ರಶ್ನಿಸಿ ಸಂಶಯಗಳನ್ನು ನಿವಾರಿಸಿಕೊಂಡೇ ನಂಬಬೇಕು.ಗುರುವನ್ನು ಹೊರಗೆ ಅರಸುವುದಕ್ಕಿಂತ ತನ್ನೊಳಗೇ ಕಂಡುಕೊಳ್ಳಬೇಕೆನ್ನುತ್ತಾರೆ ಶರಣರು. ತನ್ನ ತಾನರಿದವಂಗೆ ತನ್ನರಿವೇ ಗುರು ಎಂಬುದು ಅವರ ಮಾತಿನ ಸಾರವಾಗಿದೆ. ಶಿವಪಥ ನರಿವಡೆ ಗುರುಪಥವೇ ಮೊದಲು ಎಂದು ಬಸವಣ್ಣನವರು ಹೇಳಿದ್ದಾರೆ.
ಭವಸಾಗರವನ್ನು ದಾಟಿಸುವ ಗುರುವನ್ನು ಎಲ್ಲ ಭಕ್ತರೂ ಕೊಂಡಾಡಿದ್ದಾರೆ. ಹಾಕಿದ ಜನಿವಾರವಾ ಸದ್ಗುರುರಾಯ ನೂಕಿದ ಭವಭಾರವಾ ಎಂದು ಹಾಡಿದ್ದಾರೆ ಶಿಶುನಾಳ ಶರೀಫರು. ಅಜ್ಞಾನವೆಂಬ ಕತ್ತಲಿಗೆ ಗುರು ಜ್ಞಾನದ ಸೂರ್ಯ; ಗುರುವೇ ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಸಾರುವ ಮಂತ್ರವೊಂದಿದೆ. ಗುರುವೆಂದರೆ ನರನಲ್ಲ, ಸಾಕ್ಷಾತ್ ಹರ. ಒಟ್ಟಾರೆ ಗುರುವೆಂದರೆ ನಡೆದಾಡುವ ದೇವರು ಎಂದೇ ನಮ್ಮ ಪ್ರಾಚೀನ ಸಾಹಿತ್ಯ ಸಾರುತ್ತಿದೆ.
ಗುರು ಪೂರ್ಣಿಮೆಯ ದಿನ, ಸಮಯ ಮತ್ತು ಮಹೂರ್ತ
ಆಷಾಢ ತಿಂಗಳಿನ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎನ್ನಲಾಗುತ್ತದೆ. ಈ ವರ್ಷ ಅದು ಜುಲೈ 13ರಂದು ಆಚರಿಸಲ್ಪಡುತ್ತದೆ. ಪೂರ್ಣಿಮೆಯ ತಿಥಿ,
ಜನರಿಗೆ ವಿದ್ಯೆ ಮತ್ತು ಜ್ಞಾನದ ಬೆಳಕನ್ನು ನೀಡಿ ಮನಸ್ಸನ್ನು ಶುದ್ದಗೊಳಿಸಿ ಉತ್ತಮ ಮಾರ್ಗ ತೋರುವಂತಹ ಗುರುಗಳನ್ನು ಶ್ರದ್ದಾ ಭಕ್ತಿಯಿಂದ ಗೌರವಿಸುವ ನಮಿಸುವ ದಿನವಾಗಿದೆ.