ಅದ್ದೂರಿ ಚಾಮರಾಜೇಶ್ವರ ರಥೋತ್ಸವಕ್ಕೆ ಯದುವೀರರಿಂದ ಚಾಲನೆ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಆಷಾಡಮಾಸದಲ್ಲೇ ನಡೆಯುವ ಏಕೈಕ ರಥೋತ್ಸವ ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವ ಬುಧವಾರ ಬಹಳ ವಿಜೃಂಭಣೆಯಿಂದ ನೆರವೇರಿತು.

ಇತಿಹಾಸ ಪ್ರಸಿದ್ದ ಶ್ರೀ ಚಾಮರಾಜೇಶ್ವರಸ್ವಾಮಿ ಮಹಾರಥೋತ್ಸವವು ಪೂರ್ವಾಷಾಡ ನಕ್ಷತ್ರದಲ್ಲಿ ಪ್ರಾತಃ ಕಾಲ 11ರಿಂದ 11.30ರ ಶುಭ ಕನ್ಯಾಲಗ್ನದಲ್ಲಿ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಮರಾಜೇಶ್ವರ, ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಶಾಸಕ ಪುಟ್ಟರಂಗಶೆಟ್ಟಿ, ನಿರಂಜನ್ ಕುಮಾರ್, ಜಿಲ್ಲಾಧಿಕಾರಿ ಚಾರುಲತಾ ಸೋಮಾಲ್, ಅಪರ ಜಿಲ್ಲಾದಿಕಾರಿ ಕಾತ್ಯಯಿನಿ, ಎಸ್ಪಿ ಶಿವಕುಮಾರ್, ನಗರಸಭಾ ಸದಸ್ಯರು ಹಾಜರಿದ್ದರು.

ರಾಜ್ಯದ ನಾನಾ ಮೂಲಗಳಿಂದ ಬಂದ ಲಕ್ಷಾಂತರ ನವದಂಪತಿಗಳು ಚಾಮರಾಜೇಶ್ವರ ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಹಣ್ಣು ಧವನವನ್ನು ಎಸೆಯುತ್ತಿದ್ದರು.

ರಥೋತ್ಸವಕ್ಕೆ ಹಣ್ಣು ಧವನವನ್ನು ಎಸೆಯುವುದರಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಹಾಗೂ ಇಷ್ಟಾರ್ಥ ಪ್ರಾಪ್ತವಾಗುವುದು ಎಂಬ ನಂಬಿಕೆ ಇದೆ.

ಚಾಮರಾಜೇಶ್ವರ ರಥೋತ್ಸವದ ಜೊತೆಗೆ ಗಣಪತಿ ಮತ್ತು ಚಂಡಿಕೇಶ್ವರ ರಥಗಳು ದೇವಾಸ್ಥಾನದ ಮುಂಭಾಗದಿಂದ ಹೊರಟ ಮೆರವಣಿಗೆಯು ರಥದಬೀದಿಯ ಮೂಲಕ ಹಳೇ ಖಾಸಗೀ ಬಸ್ ನಿಲ್ದಾಣದ ಮೂಲಕ ಸಾಗಿ ಅದೇ ಸ್ಥಾನಕ್ಕೆ ಮರಳಿ ತಲುಪಿತು.

ಹಬ್ಬದ ಸಂಭ್ರಮ: ಆಷಾಡಮಾಸವನ್ನು ಸಾಮಾನ್ಯವಾಗಿ ಮೂಲಮಾಸವೆಂದು ಕರೆಯುವುದರಿಂದ ಶುಭಕಾರ್ಯಗಳು ನಿಷೇದಿಸಲ್ಪಡುತ್ತವೆ ಎಂಬ ನಂಬಿಕೆ ಇದೆ.

ಆದರೆ ಈ ಮಾಸದಲ್ಲೇ ಇಲ್ಲಿ ಚಾಮರಾಜೇಶ್ವರ ರಥೋತ್ಸವ ನಡೆಯುವುದರಿಂದ ಇಲ್ಲಿಗೆ ಆಗಮಿಸಿ ಹಣ್ಣು ಧವನ ಎಸೆಯುವುದರಿಂದ ಎತ್ತ ಕಡೆ ನೋಡಿದರೂ ನವದಂಪತಿಗಳದ್ದೇ ದರ್ಬಾರು.

ಚಾಮರಾಜನಗರಕ್ಕೆ ಆಗಮಿಸುವ ನವದಂಪತಿಗಳಿಗೆ ಅವರ ನೆಂಟರಿಷ್ಟರ ಮನೆಯಲ್ಲಿ ಹೋಳಿಗೆ ಹಬ್ಬ ಮಾಡುವುದರಿಂದ ಎಲ್ಲರಲ್ಲಿಯೂ ಹಬ್ಬದ ಮನೆ ಮಾಡಿತ್ತು.

ಪೆÇಲೀಸ್ ಬಂದೂಬಸ್ತ್: ಇಂದು ನಡೆದ ಆಷಾಡ ಮಾಸದ ಚಾಮರಾಜೇಶ್ವರ ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಪೋಲೀಸ್ ಬಂದೂಬಸ್ತ್ ಮಾಡಲಾಗಿತ್ತು.