ಡಾ.ಗುರುಪ್ರಸಾದ ರಾವ್ ಹವಲ್ದಾರ್
ಲೇಖಕರು ಮತ್ತು ಉಪನ್ಯಾಸಕರು
ದ್ರೌಪದಿ ಮುರ್ಮು ಅವರು ಈಗ ದೇಶದ ಉನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಪದವಿಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ಮತ್ತು ಒಟ್ಟಾರೆಯಾಗಿ ಎರಡನೇ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಆಡಳಿತಾರೂಢ ಎನ್ಡಿಎ ಸರ್ಕಾರ ಒಡಿಶಾದ ಬುಡಕಟ್ಟು ಜನಾಂಗದಲ್ಲಿ ಜನಿಸಿದ ಮಹಿಳೆಯೊಬ್ಬರು ರಾಷ್ಟ್ರಪತಿ ಅಭ್ಯರ್ಥಿಯನ್ನು ಮಾಡಿ ಆಯ್ಕೆಮಾಡಿ ಗೆಲ್ಲುವುದರ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ.
ಈ ಮೊದಲು ದಶಕಗಳಿಂದ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ದ್ರೌಪದಿ ಮುರ್ಮು ರವರು ಜಾರ್ಖಂಡ್ ರಾಜ್ಯದ ಮಾಜಿ ರಾಜ್ಯಪಾಲೆ ಸಹ. ಐದು ವರ್ಷಗಳ ಹಿಂದೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನವನ್ನು ತೊರೆಯಲು ನಿರ್ಧರಿಸಿದಾಗ ದ್ರೌಪದಿ ಮುರ್ಮು ಅವರನ್ನು ಮೊದಲ ಸ್ಪರ್ಧಿಯಾಗಿ ಪರಿಗಣಿಸಲಾಗಿತ್ತು. ಇದಕ್ಕೂ ಮೊದಲು ವಿಪಕ್ಷಗಳು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನ ಜಂಟಿ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು.
ದ್ರೌಪದಿ ಮುರ್ಮು ಅವರು 1958 ಜೂನ್ 20 ರಂದು ಒಡಿಶಾ ರಾಜ್ಯದ ಮಯೂರ್ ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದ ಸಂತಾಲಿ ಎಂಬ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಮತ್ತು ಅಜ್ಜ ಪಂಚಾಯಾತ್ ರಾಜ್ ಯೋಜನೆಯಡಿಯಲ್ಲಿ ಗ್ರಾಮದ ಮುಖ್ಯಸ್ಥರಾಗಿದ್ದರು.
ದ್ರೌಪದಿ ಮುರ್ಮು ವಿದ್ಯಾಭ್ಯಾಸ
ಹಲವಾರು ಏರಿಳಿತಗಳ ನಡುವೆಯೂ ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಬಿಎ ಪದವಿಯನ್ನು ಪಡೆದರು. ಮುರ್ಮು ಅವರು 1979 ಮತ್ತು 1983 ರ ನಡುವೆ ನೀರಾವರಿ ಮತ್ತು ವಿದ್ಯುತ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಸೇವೆ ಸಲ್ಲಿಸಿದರು.
ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸುವ ಮೊದಲು, ದ್ರೌಪದಿ ಮುರ್ಮು ಒಡಿಶಾದ ರೈರಂಗಪುರದಲ್ಲಿರುವ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಲ್ಲಿ ಶಿಕ್ಷಕಿಯಾಗಿದ್ದರು.
ದ್ರೌಪದಿ ಮುರ್ಮು ಅವರು ಒಡಿಶಾ ರಾಜ್ಯದ ರಾಯರಂಗಪುರದ ಜಿಲ್ಲೆಯಲ್ಲಿ ಕೌನ್ಸಿಲರ್ ಆಗಿ 1997 ರಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ಅದಾದ ಬಳಿಕ 2000 ಮತ್ತು 2004 ರ ನಡುವೆ ರಾಯರಂಗ್ಪುರದಿಂದ ಒಡಿಶಾ ವಿಧಾನಸಭೆಯ ಶಾಸಕರಾಗಿ ಕಾರ್ಯನಿರ್ವಹಿಸಿದರು, .
ಒಡಿಶಾದಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಬಿಜು ಜನತಾ ದಳದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಲವು ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಷ್ಟೇ ಅಲ್ಲದೆ ಅವರು ಸಚಿವರಾಗಿ ಸಾರಿಗೆ ಮತ್ತು ವಾಣಿಜ್ಯ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಖಾತೆಗಳನ್ನು ನಿರ್ವಹಿಸಿದರು. 2004 ರಿಂದ 2009 ರವರೆಗೆ ಒಡಿಶಾ ವಿಧಾನಸಭೆಯಲ್ಲಿ ಮತ್ತೊಮ್ಮೆ ಶಾಸಕರಾಗಿ ಸೇವೆ ಸಲ್ಲಿಸಿದರು. ಮುಂದೆ ಭಾರತೀಯ ಜನಾತ ಪಾರ್ಟಿಯ ಪರಿಶಿಷ್ಟ ಪಂಗಡಗಳ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದರು .2007 ರಲ್ಲಿ ಒಡಿಸ್ಸಾ ವಿಧಾನಸಭೆಯು ಮುರ್ಮು ಅವರ ಕಾರ್ಯವೈಖರಿಯನ್ನು ಮೆಚ್ಚಿ ಅತ್ಯುತ್ತಮ ಶಾಸಕರಿಗೆ ನೀಡುವ ನೀಲಕಂಠ ಪ್ರಶಸ್ತಿಯನ್ನುನೀಡಿ ಗೌರವಿಸಿತು.
2015 ದ್ರೌಪದಿ ಮುರ್ಮು ಅವರು ಜಾರ್ಖಂಡ್ನ ಮೊದಲ ಮಹಿಳಾ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ದ್ರೌಪದಿ ಮುರ್ಮು ತಮ್ಮ ಜೀವನದಲ್ಲಿ ಅನೇಕ ದುರಂತಗಳನ್ನು ಅನುಭವಿಸಿದಳು.
ದ್ರೌಪದಿ ಮುರ್ಮು ಅವರು ಶ್ಯಾಮ್ ಚರಣ್ ಮುರ್ಮು ಅವರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಮಗಳು ಇದ್ದರು. ಇದರಲ್ಲಿ ಇಬ್ಬರು ಗಂಡು ಮಕ್ಕಳು ಮರಣ ಹೊಂದಿದ್ದಾರೆ. ಪತಿಯು ಸಹ ಸಾವನ್ನಪ್ಪಿದ್ದಾರೆ.
2009 ಮತ್ತು 2014 ರ ನಡುವೆ, ಅವರು ತಮ್ಮ ಪತಿ, ಇಬ್ಬರು ಪುತ್ರರು, ತಾಯಿ ಮತ್ತು ಸಹೋದರನನ್ನು ಕಳೆದುಕೊಂಡರು.
2009 ರಲ್ಲಿ ಅವರ ಪುತ್ರರಲ್ಲಿ ಒಬ್ಬರು ನಿಗೂಢವಾಗಿ ನಿಧನರಾದರು. 2009 ರ ಹಿಂದಿನ ವರದಿಗಳ ಪ್ರಕಾರ, ಲಕ್ಷ್ಮಣ್ ಮುರ್ಮು (25) ಅವರು ತಮ್ಮ ಹಾಸಿಗೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದರು. ಅವರ ಪತಿ ಶ್ಯಾಮ್ ಚರಮ್ ಮುರ್ಮು 2014 ರಲ್ಲಿ ಹೃದಯಘಾತದಿಂದ ನಿಧನರಾದರು.
2012 ರಲ್ಲಿ ದ್ರೌಪದಿ ಮುರ್ಮು ಅವರು ತನ್ನ ಎರಡನೇ ಮಗನನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡರು.
ಮುರ್ಮು ಅವರ ಮಗಳು ಇತಿಶ್ರೀ ಮುರ್ಮು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಇವರು ರಗ್ಬಿ ಆಟಗಾರರಾದ ಗಣೇಶ್ ಹೆಂಬ್ರಾಮ್ ಅವರನ್ನು ವಿವಾಹವಾಗಿದ್ದಾರೆ.
ದ್ರೌಪದಿ ತನ್ನ ಜೀವನದುದ್ದಕ್ಕೂ ಸಾಕಷ್ಟು ಕಷ್ಟಪಟ್ಟಿದ್ದಾಳೆ. ನಮ್ಮ ಕಾಲದಲ್ಲಿ, ನೀವು ಓದಿ ಏನು ಮಾಡುತ್ತೀರಾ ಎಂದು ನಮಗೆ ಯಾವಾಗಲೂ ಎಲ್ಲರೂ ಕೇಳುತ್ತಿದ್ದರು. ಜನರು ಅವಳನ್ನು ನೀನು ಏನು ಮಾಡಲು ಸಾಧ್ಯವಾಗುತ್ತದೆ ಎಂದು ಕೇಳುತ್ತಿದ್ದರು. ಈಗ ಅವಳು ಏನು ಮಾಡಬಲ್ಲಳು ಎಂದು ಅವರಿಗೆ ಸಾಬೀತುಪಡಿಸಿದ್ದಾಳೆ.
ಮಹಿಳೆಯರು ಏನು ಬೇಕಾದರೂ ಮಾಡಬಲ್ಲರು ಎಂಬುದನ್ನು ಮುರ್ಮು ಸಾಬೀತುಪಡಿಸಿದ್ದರೆ. ಅವರು ಯಾವಾಗಲೂ ಅಧ್ಯಯನಶೀಲ ವ್ಯಕ್ತಿ. ಅವಳೊಂದಿಗೆ ನಮಗೆ ಸಾಕಷ್ಟು ನೆನಪುಗಳಿವೆ. ನಾನು ಅವಳ ಚಿಕ್ಕಮ್ಮ, ಆದರೆ ನಾನು ಅವಳಿಗಿಂತ ಚಿಕ್ಕವಳು. ನಾನು ಅವಳಿಂದ ಬಹಳಷ್ಟು ಕಲಿತಿದ್ದೇನೆ. ಮಹಿಳೆಯರು ಯಾವುದರಲ್ಲೂ ಕಡಿಮೆಯಿಲ್ಲ ಮತ್ತು ಏನನ್ನೂ ಸಾಧಿಸಬಲ್ಲರು ಎಂಬುದನ್ನು ಪ್ರತಿಯೊಬ್ಬರೂ ಕಲಿಯಬೇಕು, ಎಂದು ದ್ರೌಪದಿಯ ಚಿಕ್ಕಮ್ಮ ಸರಸ್ವತಿ ಮುರ್ಮು ಅವರು ಸುದ್ದಿ ಸಂಸ್ಥೆ ಯ ಸಂದರ್ಶನದಲ್ಲಿ ಹೇಳಿದ್ದಾರೆ.
‘ದ್ರೌಪದಿ ಮುರ್ಮು ಅವರ ಜೀವನದಿಂದ ಲಕ್ಷಾಂತರ ಜನರು, ವಿಶೇಷವಾಗಿ ಬಡತನ ಮತ್ತು ಕಷ್ಟಗಳನ್ನು ಎದುರಿಸಿದವರು ಹೆಚ್ಚಿನ ಶಕ್ತಿ ಪಡೆಯುತ್ತಾರೆ. ಮುರ್ಮು ಅವರು ಸಮಾಜ ಸೇವೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಬಡವರು, ದೀನದಲಿತರನ್ನು ಸಬಲೀಕರಿಸಲು ದುಡಿದಿದ್ದಾರೆ. ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವ ಅವರಿಗೆ ಆಡಳಿತದ ಅನುಭವವೂ ಇದೆ’ ಎಂದು ಪ್ರಧಾನಿ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ದ್ರೌಪದಿ ಮುರ್ಮು ಅವರು ಈಗ ದೇಶದ ಉನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಪದವಿಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ ಮತ್ತು ಒಟ್ಟಾರೆಯಾಗಿ ಎರಡನೇ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.