ಸಿಎಂ ಭರವಸೆ: ವೈದ್ಯರ ಮುಷ್ಕರ ವಾಪಸ್

ಮೈಸೂರು: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಭರವಸೆ ಮೇರೆಗೆ ವೈದ್ಯರು ತಮ್ಮ ಮುಷ್ಕರವನ್ನು ಹಿಂಪಡೆದಿದ್ದಾರೆ.
ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ವೈದ್ಯರು ತಿಳಿದ್ದಾರೆ.
ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಯಡಿಯೂರಪ್ಪನವರು ಭರವಸೆ ನೀಡಿದ್ದರಿಂದ ವೈದ್ಯರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ.
ನಂಜನಗೂಡು ಟಿಎಚ್‍ಒ ಡಾ. ನಾಗೇಂದ್ರ ಆತ್ಮಹತ್ಯೆ ಸಂಬಂಧಿಸಿದಂತೆ ನಡೆಯುತ್ತಿದ್ದ ಪ್ರತಿಭಟನೆ ಸಂಬಂಧ ಮುಖ್ಯಮಂತ್ರಿಗಳು ನೀಡಿರುವ ಭರವಸೆ ಹಾಗೂ ಮಾನವೀಯತೆಯ ದೃಷ್ಟಿಯಿಂದ ಪ್ರತಿಭಟನೆಯನ್ನು ಕೈಬಿಡುತ್ತಿರುವುದಾಗಿ ಪ್ರತಿಭಟನಾ ನಿರತ ವೈದ್ಯರು ತಿಳಿಸಿದ್ದಾರೆ.
ತಪ್ಪು ಮಾಡಿರುವ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವವರೆಗೆ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವುದಾಗಿ ವೈದ್ಯರು ತಿಳಿಸಿದ್ದಾರೆ.
ವೈದ್ಯಕೀಯ ವಿಚಾರಗಳ ಅರಿವಿರುವವರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಬೇಕು. ಕೆಎಎಸ್, ಐಎಎಸ್ ಅಧಿಕಾರಿಗಳಿಗೆ ವೈದ್ಯಕೀಯದ ಬಗ್ಗೆ ಗೊತ್ತಿರುವುದಿಲ್ಲ. ಹೀಗಾಗಿ, ಕೊರೊನಾ ನೊಡೆಲ್ ಅಧಿಕಾರಿಗಳಾಗುವುದು ಬೇಡ ಎಂದು ಪ್ರತಿಭಟನಾನಿರತ ವೈದ್ಯರು ಒತ್ತಾಯಿಸಿದ್ದಾರೆ.