ಕರಾವಳಿಯಲ್ಲಿ ಕಟ್ಟೆಚ್ಚರ:ನಿಷೇದಾಜ್ಞೆ ಜಾರಿ

ಮಂಗಳೂರು: ಕರಾವಳಿಯಲ್ಲಿ ಮತ್ತೆ ಮತ್ತೆ ಕೊಲೆ ಪ್ರಕರಣಗಳು ಮರು ಕಳಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕದಲ್ಲಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪೊಲೀಸ್ ಭದ್ರೆತೆಗಳನ್ನು ಹೆಚ್ಚಿಸಲಾಗಿದ್ದು, ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬಿಜೆಪಿ ಯುವಮೋರ್ಚಾ ಪ್ರವೀಣ್ ನೆಟ್ಟಾರು, ಹತ್ಯೆ ನಂತರ ಸೂರತ್‍ಕಲ್‍ಲ್ಲಿ ನಾಲ್ವರು ಅಪರಿಚಿತರು ಮೊಹಮ್ಮದ್ ಫಾಜಿಲ್ ಎಂಬ ಯುವಕರನ್ನು ಕೊಂದಿದ್ದರಿಂದ, ಪರಿಸ್ಥಿತಿ ಬೀಗುವಿನಿಂದ ಕೂಡಿದೆ.

ಸೂರತ್ಕಲ್, ಬಜ್ಪೆ, ಮುಲ್ಕಿ ಮತ್ತು ಪನ್ನಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಂಗಳೂರಿನ ಹಲವು ಭಾಗಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲಾಗಿದ್ದು, ಕರ್ನಾಟಕ, ಕೇರಳ ಗಡಿ ಸೇರಿದಂತೆ ಆಯಾಕಟ್ಟಿನ ಪ್ರದೇಶದಲ್ಲಿ 19 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಹೊರ ಹೋಗುವ ಮತ್ತು ಒಳ ಬರುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹುಟ್ಟೂರಲ್ಲಿ ಅಂತ್ಯಸಂಸ್ಕಾರ: ಕಳೆದ ರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡದಿಂದ ಹತ್ಯೆಯಾದ ಫಾಜಿಲ್ ಮೃತದೇಹದ ಅಂತ್ಯ ಸಂಸ್ಕಾರ ಹುಟ್ಟೂರಾದ ಮಂಗಳಪೇಟೆಯಲ್ಲಿ ಶುಕ್ರವಾರ ನಡೆಯಿತು.

ಅಂತ್ಯಸಂಸ್ಕಾರದಲ್ಲಿ ಭಾರಿ ಜನಸ್ತೋಮ ಸೇರಿತ್ತು.

ಅಹಿತಕರ ಘಟನೆ ನಡೆಯದಂತೆ ಸೂರತ್ಕಲ್ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಕೆಲವೆಡೆ ದುಷ್ಕರ್ಮಿಗಳು ಪರಿಸ್ಥಿತಿಯ ಲಾಭ ಪಡೆಯುವ ಸಾಧ್ಯತೆ ಇರುವುದರಿಂದ ರೌಡಿ ಶೀಟರ್‍ಗಳು ಮತ್ತು ಕೆಲವು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ಕೆಲವರ ಮೇಲೆ ನಿಗಾ ಇರಿಸಿದ್ದಾರೆ.