(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಮಾಲ್‌ಗಳಲ್ಲಿ ವಸ್ತುಗಳಿಗೆ ಸಾಮಾನ್ಯವಾಗಿ ಒನ್ ಗೆಟ್ ಒನ್ ಫ್ರೀ ಇದ್ದೇ ಇರುತ್ತೆ.ಅದೇ ರೀತಿ ಪ್ರಸಿದ್ಧ ದೇವಾಲಯದಲ್ಲೂ ಪ್ರಸಾದದ ಲಡ್ಡು ಜತೆಗೆ ಅಮೂಲ್ಯ ವಸ್ತು ಕೂಡಾ ಭಕ್ತರೊಬ್ಬರಿಗೆ ಸಿಕ್ಕ ಅಪರೂಪದ ಪ್ರಸಂಗ ನಡೆದಿದೆ.
ಅದು ಏನು ಅಂತೀರಾ..ಪ್ರಸಿದ್ದ ತೀರ್ಥಕ್ಷೇತ್ರ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮವಾಸ್ಯೆ ಪ್ರಯುಕ್ತ ಭಕ್ತಸಾಗರವೇ ಹರಿದು ಬಂದಿತ್ತು.
ಈ ವೇಳೆ ಭಕ್ತರೊಬ್ಬರಿಗೆ ಪ್ರಸಾದ ಜೊತೆಗೆ ಲಕ್ಷಾಂತರ ರೂಪಾಯಿ ಬಂಪರ್ ಬಹುಮಾನ ಸಿಕ್ಕಿದಂತಾಗಿದೆ.
ಭೀಮನ ಅಮಾವಾಸ್ಯೆ ಪ್ರಯುಕ್ತ ಅಪಾರ ಭಕ್ತರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ರಾಜಗೋಪುರದ ಬಳಿ ಇರುವ ವಿಶೇಷ ದರ್ಶನ ಕೌಂಟರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರ ಕಣ್ತಪ್ಪಿನಿಂದ ಲಾಡು ಪ್ರಸಾದದ ಬ್ಯಾಗ್ ಜೊತೆಗೆ 2.91 ಲಕ್ಷ ರೂ ಹಣ ಇದ್ದ ಕವರನ್ನೂ ಕೂಡಾ ಭಕ್ತನಿಗೆ ಕೊಟ್ಟುಬಿಟ್ಟಿದ್ದಾರೆ.
ನೌಕರ ಭಕ್ತರಿಗೆ ವಿಶೇಷ ದರ ಟಿಕೇಟ್ ನೀಡಿ ಲಾಡು ಪ್ರಸಾದ ನೀಡಿದ್ದಾನೆ. ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪವೇ ಹಣವನ್ನೂ ಸಹ ಇಟ್ಟಿದ್ದರಿಂದ ಗೊತ್ತಾಗದೇ ಹಣ ಇದ್ದ ಕವರ್ ಅನ್ನು ಭಕ್ತನೋರ್ವನಿಗೆ ನೀಡಿ ಎಡವಟ್ಟು ಮಾಡಿದ್ದಾರೆ.
ಬಹಳ ಹೊತ್ತಿನ ಬಳಿಕ ಸಮೀಪದಲ್ಲಿದ್ದ ಹಣದ ಕವರ್ ನೌಕರನಿಗೆ ಕಾಣಿಸದಿದ್ದರಿಂದ ಗಾಬರಿಯಾಗಿ ಹುಡುಕಾಟ ನಡೆಸಿ ಸಿಸಿಟಿವಿ ಪರಿಶೀಲಿಸಿದಾಗ ಕಣ್ತಪ್ಪಿನಿಂದ ಲಾಡು ಜೊತೆ ಹಣವೂ ಹೋಗಿರುವುದು ಗೊತ್ತಾಗಿದೆ.
ಪ್ರಾಧಿಕಾರದ ಬೊಕ್ಕಸಕ್ಕೆ 2.91 ರೂ ಲಕ್ಷ ನಷ್ಟವಾದ ಹಣವನ್ನು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದಲೇ ಜಮಾ ಮಾಡಿಸಲು ತಾಕೀತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಣವನ್ನ ನೌಕರ ಸಂಬಂಧಿಕರ ಕೈಗೆ ಒಪ್ಪಿಸಿದ್ದನೋ ಅಥವಾ ಕಣ್ತಪ್ಪಿನಿಂದಲೇ ಹೀಗಾಯತೋ ಎಂಬುದನ್ನು ಆ ಮಾದಪ್ಪನೆ ಬಲ್ಲ.!