ಚಿಕ್ಕಬಳ್ಳಾಪುರ: ಜಿಲ್ಲಾ ಮಟ್ಟದ ಸಹಕಾರ ಬ್ಯಾಂಕ್ ಗಳು ರಾಜಕೀಯ ಕೇಂದ್ರಗಳಾಗುತ್ತಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ವಿಷಾದಿಸಿದರು.
ಸಹಕಾರಿ ವಲಯದ ಈ ಬ್ಯಾಂಕುಗಳು ಆಡಳಿತ ಪಕ್ಷದ ಪರವಾಗಿ ಕಾರ್ಯನಿರ್ವಹಿಸುವ ಕೇಂದ್ರಗಳಂತಾಗುತ್ತಿವೆ. ಇದು ತಪ್ಪಿ, ರೈತ ಸ್ನೇಹಿ ಮತ್ತು ಭ್ರಷ್ಟಾಚಾರ ಮುಕ್ತ ಸಹಕಾರಿ ಕೇಂದ್ರಗಳಾಗಿ ಕಾರ್ಯನಿರ್ವಸುವಂತೆ ಮಾಡಲಿ ಎಲ್ಲರೂ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ನಗರದ ಪಿಎಲ್ ಡಿ ಬ್ಯಾಂಕ್ ನೂತನ ಕಟ್ಟಡ ರೈತಭವನ ಉದ್ಘಾಟಿಸಿದ ನಂತರ ಭಾನುವಾರ ಅವರು ಮಾತನಾಡಿ, ಸಹಕಾರಿ ಬ್ಯಾಂಕುಗಳು ಅಧಿಕಾರದಲ್ಲಿರುವ ಪಕ್ಷಗಳ ಕೈಗೊಂಬೆಗಳಂತೆ ದುರುಪಯೋಗ ಮಾಡಲಾಗುತ್ತಿದೆ. ಇದನ್ನು ಹೋಗಲಾಡಿಸಿ, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಇನ್ನಷ್ಟು ಕ್ರಮಗಳ ಅಗತ್ಯವಿದೆ ಎಂದರು.
ಸಹಕಾರಿ ರಂಗವನ್ನು ರಾಜಕೀಯ ಮತ್ತು ಭ್ರಷ್ಟಾಚಾರ ಮುಕ್ತಗೊಳಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ಅಮಿತ್ ಶಾ ಸಮರ್ಥರಿದ್ದಾರೆ. ಅವರಿಂದ ಮಾತ್ರ ಭ್ರಷ್ಟಾಚಾರ ಮುಕ್ತ ಸಹಕಾರ ಕ್ಷೇತ್ರ ನಿರ್ಮಾಣ ಸಾಧ್ಯ ಎಂದು ಸಚಿವರು ಅಭಿಪ್ರಾಯ ಪಟ್ಟರು.
ರೈತರ ಪಾಲಿಗೆ ಕಾಮಧೇನು : ಕಳೆದ 83 ವರ್ಷಗಳಿಂದ ನಗರದಲ್ಲಿ ಪಿಎಲ್ ಡಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಇಷ್ಟು ಸುದೀರ್ಘ ಅವಧಿಗೆ ಬ್ಯಾಂಕನ್ನು ಮುನ್ನೆಡೆಸಿದ ಹಿಂದಿನ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಬೇಕು. ಪಿಎಲ್ ಡಿ ಬ್ಯಾಂಕು ರೈತರ ಪಾಲಿಗೆ ಕಾಮಧೇನುವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಣ್ಣಿಸಿದರು.
ಸಾಮಾನ್ಯರಿಗೂ ಬ್ಯಾಂಕ್ : ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಬ್ಯಾಂಕುಗಳಿದ್ದವು. ಬಡವ ಖಾತೆ ತೆರೆಯಲೂ ಸಾಧ್ಯವಾಗದ ಸ್ಥಿತಿ ಇತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಜನಧನ್ ಯೋಜನೆ ಮೂಲಕ 50 ಕೋಟಿ ಭಾರತೀಯರಿಗೆ ಬ್ಯಾಂಕ್ ಖಾತೆ ಮಾಡಿಕೊಟ್ಟಿದ್ದಾರೆ. ಕೇವಲ ಖಾತೆ ಮಾಡಿಸಿದ್ದು ಮಾತ್ರವಲ್ಲ, ಕೃಷಿ ಸಮ್ಮಾನ್ ಯೋಜನೆಯಡಿ ವಾರ್ಷಿಕ 10 ಸಾವಿರ ರೂ.ಗಳನ್ನು ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದರು.
ಶೀಘ್ರ ಹಾಲು ಒಕ್ಕೂಟ ಕಾರ್ಯಾರಂಭ : ಈಗಾಗಲೇ ಹಾಲು ಒಕ್ಕೂಟ ಪ್ರತ್ಯೇಕವಾಗಿದೆ. ಎಂಡಿ ನೇಮಕ ಮತ್ತು ಅಧಿಕಾರಿಗಳ ನೇಮಕವಾಗಿದೆ. ಇದನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಜಿಲ್ಲೆಯಲ್ಲಿ 5 ಲಕ್ಷ ಲೀಟರ್ ಹಾಲು ಉತ್ಪಾದನೆಯಿದ್ದು, ಹಾಲು ಉತ್ಪಾದಕ ಸಂಘಗಳೂ ಕೋಲಾರಕ್ಕಿಂತ ಹೆಚ್ಚಿವೆ. ಹಾಗಾಗಿ ಪ್ರತ್ಯೇಕ ಒಕ್ಕೂಟವಾಗಲು ಎಲ್ಲ ಅರ್ಹತೆ ಹೊಂದಿದೆ ಎಂದು ಸಚಿವರು ವಿಭಜನೆಯನ್ನು ಸಮರ್ಥಿಸಿದರು.
ಉತ್ತರ ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರ ಉತ್ತಮವಾಗಿದೆ. ದಕ್ಷಿಣದಲ್ಲಿ ಇದು ಇನ್ನೂ ಜನಸ್ನೇಹಿಯಾಗಬೇಕು. ಸಕ್ಕರೆ ಕಾರ್ಖಾನೆಗಳು ಸಹಕಾರಿ ಕ್ಷೇತ್ರದಲ್ಲಿ ನಡೆಯುತ್ತಿವೆ. ಹಾಲು ಉತ್ಪಾದಕರು ವೈದ್ಯಕೀಯ ಕಾಲೇಜು ನಡೆಸುತ್ತಿದ್ದಾರೆ. ಸಹಕಾರಿ ಕ್ಷೇತ್ರ ಬೆಳೆದರೆ ರೈತರೂ ಬೆಳೆಯುತ್ತಾರೆ, ರೈತ ಬಲಗೊಂಡರೆ ಮಾತ್ರ ದೇಶ ಬಲವಾಗಲು ಸಾಧ್ಯ. ರೈತನ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಪ್ರತಿಪಾದಿಸಿದರು.