ಹಿಂದಿ ಶಿಕ್ಷಕಿಯ ಅಸಹಜ ಸಾವು ಪ್ರಕರಣ:ಕೊಲೆಗಾರ್ತಿ ಕೌನ್ಸಿಲರ್!

ಮೈಸೂರು: ಕಳೆದ ಐದು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಹಿಂದಿ ಶಿಕ್ಷಕಿ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇದು ಕೊಲೆ ಎಂದು ಸಾಬೀತು ಪಡಿಸಿ ನಗರಸಭೆ ಕೌನ್ಸಿಲರ್ ಹೆಡೆಮುರಿ ಕಟ್ಟಿದ್ದಾರೆ.
ನಂಜನಗೂಡು ತಾಲೂಕಿನ ಮಹದೇವ ನಗರ ಗ್ರಾಮದಲ್ಲಿ ಕಳೆದ ಐದು ತಿಂಗಳ ಹಿಂದೆ ನಡೆದಿದ್ದ ಶಿಕ್ಷಕಿಯ ಸಾವಿನ ರಹಸ್ಯವನ್ನು ಕಡೆಗೂ ನಂಜನಗೂಡು ಪೊಲೀಸರು ಭೇದಿಸಿದ್ದಾರೆ. 
ಮಹದೇವ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಲೋಚನಾ ಮಾರ್ಚ್ 9 ರಂದು  ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.
ಈ ಕುರಿತು ಅಸಹಜ ಸಾವೆಂದು ಪೊಲೀಸರು  ಮೊಕದ್ದಮೆ ದಾಖಲಿಸಿದ್ದರು.
ನಂಜನಗೂಡು ನಗರಸಭೆ ಕೌನ್ಸಿಲರ್ ಗಾಯಿತ್ರಿ ಸೇರಿದಂತೆ ನಾಲ್ವರನ್ನು  ಪೊಲೀಸರು ಬಂಧಿಸಿದ್ದಾರೆ. 
ಮೃತ ಶಿಕ್ಷಕಿಯೊಂದಿಗೆ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಬೇಸತ್ತಿದ್ದ ಕೌನ್ಸಿಲರ್ ಗಾಯಿತ್ರಿ ಸುಫಾರಿ ಕೊಟ್ಟು ಕೊಲೆ ಮಾಡಿಸಿರುವುದು ವಿಚಾರಣೆ ಬೆಳಕಿಗೆ ಬಂದಿದೆ.
ನಂಜನಗೂಡು ಪಟ್ಟಣದ 5 ನೇ ವಾರ್ಡಿನಿಂದ ನಗರಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿರುವ ಗಾಯಿತ್ರಿ ಮುರುಗೇಶ್ ಹಾಗೂ ಆಕೆಯ ಸಂಬಂಧಿಗಳಾದ ಭಾಗ್ಯ, ನಾಗಮ್ಮ ಮತ್ತು ಕುಮಾರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದು ಐದು ತಿಂಗಳಾದರೂ ಪ್ರಕರಣದ ರಹಸ್ಯ ಬೇಧಿಸದ ಪೊಲೀಸರ ವಿರುದ್ಧ ಜನರು ಅಸಾಮಾದಾನ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ನಂಜನಗೂಡಿಗೆ ಭೇಟಿ ನೀಡಿದ್ದ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಜೊತೆ ಈ ಪ್ರಕರಣದ ಬಗ್ಗೆ ಪತ್ರಕರ್ತರು ಪ್ರಸ್ತಾಪ ಮಾಡಿದ್ದರು.
ಇದರ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಎಎಸ್ಪಿ ಡಾ.ಮಾಲಿನಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೋವಿಂದರಾಜ್ ಉಸ್ತುವಾರಿಯಲ್ಲಿ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ ತಳವಾರ್ ಹಾಗೂ ಸಿಬ್ಬಂದಿ ತನಿಖೆಯನ್ನು ತೀವ್ರಗೊಳಿಸಿದ್ದರು.
ತನಿಖೆ ವೇಳೆ ದೊರೆತ ಸುಳಿವಿನ ಆಧಾರದ ಮೇಲೆ ಕೌನ್ಸಿಲರ್ ಗಾಯಿತ್ರಿ ಮುರುಗೇಶ್ ಹಾಗೂ ಸಂಬಂಧಿಕರನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಡಿ.ಗ್ರೂಪ್ ನೌಕರನಾಗಿದ್ದ ಮುರುಗೇಶ್ ಬಿಜೆಪಿ ಮುಖಂಡನಾಗಿ ಗುರುತಿಸಿಕೊಂಡಿದ್ದ.
ಸುಲೋಚನಾ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಈ ವಿಚಾರದಲ್ಲಿ ಮುರುಗೇಶ್ ಮನೆಯಲ್ಲಿ ಸಾಕಷ್ಟು ಬಾರಿ ಗಲಾಟೆ ಆಗಿತ್ತು. 
ತನ್ನ ಕುಟುಂಬದ ನೆಮ್ಮದಿ ಹಾಳು ಮಾಡುತ್ತಿರುವ ಸುಲೋಚನಾಳನ್ನು  ಮುಗಿಸಲು ಸ್ಕೆಚ್ ಹಾಕಿದ ಗಾಯಿತ್ರಿ ತನ್ನ ಸಂಬಂಧಿಕರಾದ ಭಾಗ್ಯ, ನಾಗಮ್ಮ ಹಾಗೂ ಕುಮಾರ್ ಜೊತೆ ಸೇರಿ ಕೊಲೆ ಮಾಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ
ಘಟನೆ ನಡೆದು ಐದು ತಿಂಗಳ ನಂತರ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.