ಮಳೆ ಸಂಬಂಧಿ ತುರ್ತು ಹಾಗೂ ವಿಪತ್ತು ನಿರ್ವಹಣಾ ಕಾರ್ಯ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

ಚಾಮರಾಜನಗರ: ಜಿಲ್ಲಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಹಾಗೂ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಭಾರತೀಯ ಹವಾಮಾನ ಇಲಾಖೆಯು ಮುಂದಿನ 2 ದಿನಗಳ ಕಾಲ ಅತೀ ಹೆಚ್ಚಿನ ಮಳೆ ಬೀಳುವ ಸಂಭವವಿದೆ ಎಂದು ವರದಿ ನೀಡಿರುವ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳಿಂದ ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ಪಡೆದರು.

ಪರಿಸ್ಥಿತಿ ಅವಲೋಕಿಸಿರುವ ಸಚಿವರು ಮಳೆಯಿಂದ ಕೃಷಿ, ತೋಟಗಾರಿಕೆ ಬೆಳೆಹಾನಿ, ಜಾನುವಾರು, ಮನೆ ಮತ್ತು ಮೂಲ ಸೌಕರ್ಯಗಳಿಗೆ ಹಾನಿಯಾದಲ್ಲಿ ಸಮರೋಪಾದಿಯಲ್ಲಿ ಪರಿಸ್ಥಿತಿ ನಿಭಾಯಿಸಬೇಕೆಂದು ನಿರ್ದೇಶನ ನೀಡಿದರು.

ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಜನಸಾಮಾನ್ಯರ ಸಂಕಷ್ಟಗಳಿಗೆ ತುರ್ತಾಗಿ ಸ್ಪಂದಿಸುವಂತೆ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ.

ಜೀವಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯತೆ ಆಧರಿಸಿ ಅಪಾಯಕ್ಕೀಡಾಗಬಹುದಾದ ಕುಟುಂಬಗಳನ್ನು ಗುರುತಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಅಗತ್ಯವಿರುವ ಕಡೆ ಕಾಳಜಿ, ಸಾಂತ್ವನ ಕೇಂದ್ರಗಳನ್ನು ತೆರೆದು ಗುಣಮಟ್ಟದ ಆಹಾರ ಇನ್ನಿತರೆ ಸೌಲಭ್ಯಗಳನ್ನು ನೀಡಿ ಯೋಗಕ್ಷೇಮ ನೋಡಿಕೊಳ್ಳಲು ತಂಡ ನಿಯೋಜಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.