ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ನಕಲಿ ಛಾಪಾ ಕಾಗದದ ದಂದೆ ತಲೆ ಎತ್ತಿದೆ.
ಕಳೆದ ಹದಿನೆಂಟು ವರ್ಷಗಳ ಹಿಂದೆ ಈ ದಂದೆ ಭಾರೀ ಸದ್ದು ಮಾಡಿತ್ತು ತೆಲಗಿ ಸೇರಿದಂತೆ ಹಲವರ ಬಂಧನವಾಗಿತ್ತು.ನಂತರ ಈ ದಂದೆಗೆ ಕಡಿವಾಣ ಬಿದ್ದಿತ್ತು.
ಸರ್ಕಾರ ನಿಷೇಧಿಸಿರುವ ಈ ಛಾಪಾ ಕಾಗದಗಳನ್ನು ನಕಲಿ ಮಾಡಿ ಮುದ್ರಿಸಿ ಮಾರಾಟ ಮಾಡುತ್ತಿದ್ದ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
5.11 ಲಕ್ಷ ರೂ. ಮೌಲ್ಯದ ವಿವಿಧ ಮುಖ ಬೆಲೆಯ 2664 ನಕಲಿ ಸ್ಟಾಂಪ್ ಪೇಪರ್ಗಳು, ನಕಲಿ ಸೀಲ್ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ವೆಂಕಟೇಶ್, ವಿಶ್ವನಾಥ್, ಕಾರ್ತಿಕ್, ಶ್ಯಾಮರಾಜು, ಶಶಿಧರ್, ಕರಿಯಪ್ಪ, ರವಿಶಂಕರ್, ಶಿವಶಂಕರಪ್ಪ, ಗುಣಶೇಖರ್, ರಾಘವ ಎನ್.ಕಿಶೋರ್ ಬಂಧಿತ ಆರೋಪಿಗಳು.
ಈ ಆರೋಪಿಗಳು ಒಂದು ಹಳೆಯ ಸ್ಟಾಂಪ್ ಪೇಪರ್ನ್ನು 5 ಸಾವಿರದಿಂದ 8 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು.
ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾಯ ಭವನದ ಆವರಣದಲ್ಲಿರುವ ಟೈಪಿಂಗ್ಪೂಲ್ನಲ್ಲಿರುವ ಕೆಲವು ಅಂಗಡಿಗಳಲ್ಲಿ ಸರ್ಕಾರ ನಿಷೇಧಿಸಿರುವ ಛಾಪಾ ಕಾಗದಗಳನ್ನು, ವಿವಿಧ ಮುಖಬೆಲೆಯ ಸ್ಟಾಂಪ್ ಪೇಪರ್ಗಳನ್ನು ಹೆಚ್ಚಿನ ಬೆಲೆಗೆ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಸಂಗ್ರಹಿಸಿದರು.
ತಕ್ಷಣ ಕೇಂದ್ರ ಅಪರಾಧ ವಿಭಾಗದ ವಿಶೇಷ ವಿಚಾರಣಾ ದಳದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 5.11 ಲಕ್ಷ ರೂ. ಮೌಲ್ಯದ ನಕಲಿ ಸ್ಟಾಂಪ್ ಪೇಪರ್ಗಳು, ಇವುಗಳನ್ನು ಮುದ್ರಿಸಲು ಬಳಸುತ್ತಿದ್ದ ಕಂಪ್ಯೂಟರ್, ಪ್ರಿಂಟರ್, ವಿವಿಧ ಸರ್ಕಾರಿ ಕಚೇರಿಯ ಹೆಸರಿನ ಮುದ್ರೆಗಳು ಮತ್ತು ನಕಲಿ ಸ್ಟಾಂಪ್ ಪೇಪರ್ಗೆ ಬಳಸುವ ವಿವಿಧ ಮುದ್ರೆಗಳಿರುವ 119 ನಕಲಿ ಸೀಲುಗಳು, ಮೊಬೈಲ್ ಫೋನ್ಗಳು, ಹಾರ್ಡ್ ಡಿಸ್ಕ್, ಛಾಪಾ ಕಾಗದಗಳ ಮೂಲಕ ನಕಲಿಯಾಗಿ ಸೃಷ್ಟಿಸಿದ್ದ 1990, 1995, 2002 ಹಾಗೂ 2009ನೇ ಇಸವಿಯ ನಿವೇಶನವೊಂದರ ನಕಲಿ ಜಿಪಿಎ ಪತ್ರ ಹಾಗೂ 2009ನೇ ಇಸವಿಯ ಹೆಬ್ಬೆಟ್ಟು ಪಡೆದುಕೊಂಡಿರುವ ಒಂದು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.