ಮೈಸೂರು: ಆಷಾಢ ಮಾಸಕ್ಕೆ ತವರು ಮನೆಗೆ ಬಂದ ನವವಿವಾಹಿತೆ ಪ್ರಿಯಕರನೊಂದಿಗೆ ಪರಾರಿಯಾಗಿ ನಂತರ ಬೇರ್ಪಟ್ಟ ಕಾರಣ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ನಂಜನಗೂಡು ತಾಲೂಕು ಕಾರ್ಯ ಗ್ರಾಮದ ವರ್ಷಿತಾ (20) ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ.
ಈಕೆ ಆಷಾಢ ಮಾಸಕ್ಕಾಗಿ ತವರು ಮನೆಗೆ ಬಂದಿದ್ದು, ಪಕ್ಕದ ಮನೆಯಲ್ಲಿದ್ದ ಪ್ರಿಯಕರ ಕಿರಣ್ ಜೊತೆ ಪರಾರಿಯಾಗಿದ್ದಳು.
ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದು ವಾರದಲ್ಲಿ ಅವರಿಬ್ಬರನ್ನು ಪತ್ತೆ ಮಾಡಿ ಪ್ರಿಯಕರನಿಂದ ವರ್ಷಿತಾಳನ್ನು ಬೇರ್ಪಡಿಸಿದ್ದರು.
ಪ್ರಿಯಕರನ ಅಗಲಿಕೆಯಿಂದ ಮನನೊಂದ ಈಕೆ ನೇಣಿಗೆ ಶರಣಾಗಿದ್ದಾಳೆ.
ವರ್ಷಿತಾ ತನ್ನ ಮನೆಯ ಪಕ್ಕದಲ್ಲಿದ್ದ ಕಿರಣ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಹೆತ್ತವರು ಮಗಳ ಮನ ಒಲಿಸಿ ಚಾಮರಾಜನಗರದ ಅಭಿಷೇಕ್ ಜೊತೆ ಮೇ 8 ರಂದು ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು.
ಆಷಾಢ ಪ್ರಯುಕ್ತ ವರ್ಷಿತಾ ತವರು ಮನೆಗೆ ಬಂದಿದ್ದಳು. ಈ ವೇಳೆ ಪಕ್ಕದ ಮನೆಯಲ್ಲಿದ್ದ ಪ್ರಿಯತಮ ಕಿರಣ್ ಜೊತೆ ಓಡಿಹೋಗಿದ್ದಳು.
ವರ್ಷಿತಾ ಕಾಣೆಯಾದ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರೇಮಿಗಳು ಬೆಂಗಳೂರಿನಲ್ಲಿ ಸಿಕ್ಕಿ ಬಿದ್ದಿದ್ದು ವಾಪಸ್ ಕರೆತಂದ ಪೊಲೀಸರು ಇಬ್ಬರಿಗೂ ಬುದ್ದಿವಾದ ಹೇಳಿ ಬೇರ್ಪಡಿಸಿದ್ದರು.
ನಂತರ ವರ್ಷಿತಾ ಮೈಸೂರಿನಲ್ಲಿದ್ದ ಸಂಬಂಧಿಕರ ಮನೆಗೆ ಬಂದು ಮೂರು ದಿನ ಇದ್ದು ನಂತರ ರಾಂಪುರ ಗ್ರಾಮದಲ್ಲಿರುವ ತಾತನ ಮನೆಗೆ ಬಂದಿದ್ದಳು.
ಪ್ರಿಯಕರನ ಅಗಲಿಕೆಯಿಂದ ಮನನೊಂದಿದ್ದ ವರ್ಷಿತಾ ತಾತನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹುಲ್ಲಹಳ್ಳಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.