ಸ್ವಾತಂತ್ರ್ಯದ ಅಮೃತ ಮಹೋತ್ಸವ , ಚಾಮರಾಜನಗರ ಜಿಲ್ಲೆಯ ರಜತ ಮಹೋತ್ಸವದ ಈ ಸಂಧರ್ಭದಲ್ಲಿ ಜಿಲ್ಲಾ ರಂಗಮಂದಿರ ಲೋಕಾರ್ಪಣೆ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ:  ಹಿಂದುಳಿದ ಜಿಲ್ಲೆ ಎಂದೆ ಅಪಖ್ಯಾತಿಗೊಳಗಾದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಅಂತು ಇಂತು ಕೊನೆಗೂ ಒಂದು ಸುಸಜ್ಜಿತ ರಂಗಮಂದಿರ ಸಜ್ಜಾಗಿ ಲೋಕಾರ್ಪಣೆಗೆ ಸಿದ್ದವಾಗಿದೆ ಅದೂ..ಡಾ.ರಾಜ್ ಕುಮಾರ ಜಿಲ್ಲಾ ರಂಗಮಂದಿರದ ಹೆಸರಿನಲ್ಲಿ…

ಮೇರು ನಟ ಡಾ. ರಾಜ್‌ಕುಮಾರ್  ಕನ್ನಡ ನಾಡುನುಡಿಗೆ ಸಲ್ಲಿಸಿದ ಸೇವೆ ಅನನ್ಯ ಹಾಗು ಅವಿಸ್ಮರಣೀಯ.  ಹಾಗಾಗಿಯೇ ಈ ನಟ ಸಾರ್ವಭೌಮನ ಹೆಸರನ್ನು ರಾಜ್ಯದ ವಿವಿದ ಕಡೆ ಕಲಾಮಂದಿರಗಳಿಗೆ, ಸಭಾಂಗಣಗಳಿಗೆ, ರಸ್ತೆಗಳಿಗೆ ನಾಮಕರಣ ಮಾಡೋದು ಸಹಜ  ಆದರೆ ಅವರ ಊರು ಚಾಮರಾಜನಗರದ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಅವರ ಹೆಸರನ್ನು ಸದಾ ನೆನೆಯುವಂತೆ ಯಾವುದೇ ರಸ್ತೆಗಾಗಲಿ, ಕಟ್ಟಡಕ್ಕಾಗಲಿ ನಾಮಕರಣ ಮಾಡದಿರುವುದು  ಕಲಾಭಿಮಾನಿಗಳಲ್ಲಿ ನೋವಿನ ಸಂಗತಿಯಾಗಿತ್ತು. ಆದರೆ ಇದೀಗ ಇಂದು ಲೋಕಾರ್ಪಣೆ ಆಗುವ ಮೂಲಕ ಆ ನೋವು ದೂರವಾಗುವ ಕಾಲ ಬಂದಂತಾಗಿದೆ.

ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರು ಡಾ.ರಾಜ್‌ಕುಮಾರ್ ತಂದೆ ಪುಟ್ಟಸ್ವಾಮಯ್ಯ ಅವರ ಹುಟ್ಟೂರು. ಆದರೆ ಅವರು ನೆಲೆಸಿದ್ದು ಚಾಮರಾಜನಗರಕ್ಕೆ ಅನತಿ ದೂರದಲ್ಲಿರುವ ತಾಳವಾಡಿ ಫಿರ್ಕಾದ ದೊಡ್ಡಗಾಜನೂರಿನಲ್ಲಿ. ಡಾ.ರಾಜ್ ಜನಿಸಿದ್ದು ಇದೇ ಗಾಜನೂರಿನಲ್ಲಿ. ಡಾ.ರಾಜ್‌ಗೆ ಹುಟ್ಟೂರು ಗಾಜನೂರು ಎಂದರೆ ಬಲು ಪ್ರೀತಿ. ಅದರಲ್ಲು ತಾವು ಹುಟ್ಟಿದ ಮನೆ ಎಂದರೆ ಪಂಚಪ್ರಾಣ ಹಾಗಾಗಿಯೇ ಅವರು ಗಾಜನೂರನ್ನು ಸ್ವರ್ಗ ಎಂದು ಮತ್ತು ಚಾಮರಾಜನಗರವನ್ನು ಸ್ವರ್ಗದ ಹೆಬ್ಬಾಗಿಲು ಎನ್ನುತ್ತಿದ್ದರು‌.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ ಭವನದ ಪಕ್ಕದಲ್ಲೇ ರೂ.7.55 ಕೋಟಿ ವೆಚ್ಚದಲ್ಲಿ ರಂಗಮಂದಿರ ನಿರ್ಮಾಣ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ದಗೊಂಡಿದೆ. ಈ ಕಟ್ಟಡಕ್ಕೆ ‘ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರ ಎಂದು ನಾಮಕರಣ ಮಾಡಲಾಗಿದೆ. ಈ ಮೂಲಕ ಜಿಲ್ಲಾಡಳಿತ ರಾಜ್​ಕುಮಾರ್​ ಅವರಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದೆ.

  2003ರಲ್ಲಿ ನಾಲ್ಕು ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ  ಗುದ್ದಲಿ ಪೂಜೆ ನೆರವೇರಿದ  ರಂಗಮಂದಿರದ ಕಾಮಗಾರಿ ಅನುದಾನದ ಕೊರತೆಯಿಂದ ಕುಂಟುತ್ತಾ ಸಾಗಿತ್ತು.  ಹೆಚ್ಚು ಕಡಿಮೆ‌ ಎರಡು ದಶಕವೇ ಕಳೆದರು ಪೂರ್ಣಗೊಳ್ಳದೆ  ರಂಗ ಚಟುವಟಿಕೆಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಳಿಗೆ ಸುಸಜ್ಜಿತ ವೇದಿಕೆಯೇ ಇಲ್ಲದೆ ಪರದಾಡುವಂತಾಗಿತ್ತು. ಆದರೆ ಇತ್ತೀಚೆಗೆ ವಸತಿ ಸಚಿವ ವಿ.ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ರಂಗಮಂದಿರದ ಕಾಮಗಾರಿಗೆ ವೇಗ ನೀಡಿದರು. ಕಲಾವಿದರ ಒತ್ತಾಯ ಹಾಗು ಒತ್ತಾಸೆಯ ಫಲವಾಗಿ ಇದೀಗ ರಂಗಮಂದಿರ ಸಿದ್ಧವಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗು ಜಿಲ್ಲೆಯ ರಜತಮಹೋತ್ಸವದ ಈ ಸಂಧರ್ಭದಲ್ಲಿ ರಂಗಮಂದಿರ ಲೋಕಾರ್ಪಣೆಗೆ ಸಿದ್ದಗೊಂಡಿದೆ. ಇಂದು ಸ್ವಾತಂತ್ರ್ಯ ದಿನಾಚರಣೆಯ ನಂತರ “ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರ”ವನ್ನು ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದಾರೆ. ಅಂತೂ ಇಂತೂ ತಡವಾಗಿಯಾದರೂ ರಂಗಮಂದಿರ ಕಾಮಗಾರಿ ಪೂರ್ಣಗೊಳಿಸಿ ಅದಕ್ಕೆ ಡಾ.ರಾಜ್‌ಕುಮಾರ್ ಅವರ ಹೆಸರು ನಾಮಕರಣ ಮಾಡುವ ಮೂಲಕ ಚಾಮರಾಜನಗರ ಜಿಲ್ಲಾಡಳಿತ ಮೇರನಟನಿಗೆ ತವರು ಜಿಲ್ಲೆಯ ‌ಪರವಾಗಿ ಅರ್ಥಪೂರ್ಣ ಗೌರವ ಸಲ್ಲಿಸುತ್ತಿದೆ.