4 ಲಕ್ಷರೂ ವಂಚನೆ: ಸ್ವಾಮೀಜಿ ಬಂಧನ

ಬೆಳಗಾವಿ : ಸರ್ಕಾರಿ ನೌಕರಿ ಕೊಡಿಸುವುದಾಗಿ ಜನರಿಗೆ ಮೋಸ ಮಾಡಿ ಹಲ್ಲೆ ಮಾಡಿದ ಆರೋಪದಡಿ ವಂಚಕ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಅಲ್ಲಮಪ್ರಭು ಹಿರೇಮಠ ಬಂಧಿತ ಆರೋಪಿ.

ಈತ ಕಳೆದ 6 ತಿಂಗಳ ಹಿಂದೆ ಎಸ್ ಸಿ ಕೋಟಾದಡಿ ಡಿ ದರ್ಜೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಮೂಡಲಗಿ ಪಟ್ಟಣದ ಸಂತೋಷ ಹವಳೆವ್ವಗೋಳ ಎಂಬಾತನಿಂದ 4 ಲಕ್ಷ ರೂಪಾಯಿ ಪಡೆದಿದ್ದ.

ಯುವಕ ಕೆಲಸ ಸಿಗದೇ ಇದ್ದಾಗ ಹಣ ವಾಪಸ್ ಕೇಳಿದ್ದಾನೆ.

ಆಗಸ್ಟ್ 15ರಂದು ಹಣ ಕೇಳಲು ಹೋದಾಗ ಅಲ್ಲಮಪ್ರಭು ಹಿರೇಮಠ ಸಂಗಡಿಗರ ಜೊತೆಗೂಡಿ ಚಾಕುವಿನಿಂದ ಸಂತೋಷ ಹವಳೆವ್ವಗೋಳ ಬೆನ್ನಿಗೆ, ಕಾಲಿಗೆ ಚುಚ್ಚಿ ಗಾಯ ಮಾಡಿದ್ದಾನೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖತರ್ನಾಕ್ ಆರೋಪಿ ಅಲ್ಲಮಪ್ರಭು ಹಿರೇಮಠನನ್ನು ಬಂಧಿಸಿದ್ದಾರೆ.

ಇದಲ್ಲದೇ ಆರೋಪಿ ಅಲ್ಲಮಪ್ರಭು ಹಿರೇಮಠ ವಿರುದ್ಧ ಮತ್ತೊಂದು ವಂಚನೆ ದೂರು ಮೂಡಲಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಬಿಬಿಎಂಪಿ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಿ ಗೆಲ್ಲಿಸಿಕೊಡುವುದಾಗಿ 5 ಲಕ್ಷ ಹಣ ಪಡೆಯಲಾಗಿದೆ ಎಂದು ಆರೋಪಿಸಿ ಬೆಂಗಳೂರು ನಿವಾಸಿ ಪ್ರಶಾಂತ್ ಕುಮಾರ್ ದೂರು ನೀಡಿದ್ದಾರೆ.

ಈ ದೂರಿನ ಆಧಾರದ ಮೇಲೆ ಅಲ್ಲಮಪ್ರಭು ವಿರುದ್ಧ ಬೆಳಗಾವಿ ಜಿಲ್ಲೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.