ಪ್ರೀತಿ ನಿರಾಕರಣೆ: ಕಾರು ಡಿಕ್ಕಿ ಹೊಡೆಸಿ ಪ್ರಿಯತಮೆಯ ಕೊಂದ ಪಾಗಲ್ ಪ್ರೇಮಿ

ಹಾಸನ : ಅಪಘಾತದಲ್ಲಿ ಮೃತಪಟ್ಟಿದ್ದ ಯುವತಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೇ ಆಕೆಯನ್ನು ಕೊಂದಿದ್ದಾನೆ.

ಈ ಪಾಗಲ್  ಕಾರಿನಿಂದ ಯುವತಿಗೆ ಡಿಕ್ಕಿ ಹೊಡೆಸಿ ಕೊಲೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.

ಆಗಸ್ಟ್ 3 ರಂದು ಹಾಸನ ಹೊರವಲಯದ ಬೂವನಹಳ್ಳಿ ಕ್ರಾಸ್ ಬಳಿ ಸರಣಿ ಅಪಘಾತ ನಡೆದಿತ್ತು.

ಆಲ್ಟೋ ಕಾರು ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಯುವತಿ ಶರಣ್ಯಳಿಗೆ ಡಿಕ್ಕಿ ಹೊಡೆದು ಬಳಿಕ ಹಾಲಿನ ಗೂಡ್ಸ್ ಆಟೋ, 2 ಬೈಕ್ ಹಾಗೂ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿತ್ತು. ಚಾಲಕ ಎಸ್ಕೇಪ್ ಆಗಿದ್ದ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶರಣ್ಯ ಆಗಸ್ಟ್ 4ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು.

ಅಂದೇ ಶರಣ್ಯಳ ಅಣ್ಣ ಸಚಿನ್ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆಗಸ್ಟ್ 12ರಂದು ಸಕಲೇಶಪುರದಲ್ಲಿ ಆರೋಪಿ ಭರತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಆತ ಸತ್ಯಾಂಶ ಬಾಯ್ಬಿಟ್ಟಿದ್ದಾನೆ.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹೆಂಜುಗೊಂಡನಹಳ್ಳಿ ಗ್ರಾಮದ ಶರಣ್ಯ ಭಾರತಿ ಅಸೋಸಿಯೇಟ್ಸ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು.

ಹಾಸನ ತಾಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ ಭರತ್ ಜಿ.ಆರ್.ಶರಣ್ಯಳ ಹಿಂದೆ ಬಿದ್ದಿದ್ದ.

ನನ್ನ ಪ್ರೀತಿಯನ್ನು ಒಪ್ಪಿಕೋ ಎಂದು ಪದೇ ಪದೇ ಪೀಡಿಸುತ್ತಿದ್ದು, ಶರಣ್ಯ ನಿರಾಕರಿಸಿದ್ದಳು.

ಇದರಿಂದ ಕೋಪಗೊಂಡ ಭರತ್, ಮೈಸೂರಿನಿಂದ ಕಾರು ಬಾಡಿಗೆಗೆ ತಂದು ಆಗಸ್ಟ್ 3 ರಂದು ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಶರಣ್ಯಳಿಗೆ ಡಿಕ್ಕಿ ಹೊಡೆದು ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ.

ಭರತ್‌ನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.