ಕೊಡಗಿನಲ್ಲಿ ನಡೆದ ಕೃತ್ಯವನ್ನ ಸರ್ಕಾರವೇ ಮಾಡಿಸಿದೆ -ಸಿದ್ದು

ಚಿಕ್ಕಮಗಳೂರು: ಕೊಡಗಿನಲ್ಲಿ ನಡೆದ ಘಟನೆಯನ್ನ ರಾಜ್ಯ ಸರ್ಕಾರವೇ ಮಾಡಿಸಿದೆ‌ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಗುಡುಗಿದರು.

ಇದನ್ನು ಖಂಡಿಸಿ ಆಗಸ್ಟ್ 26 ರಂದು ಕೊಡಗು ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.

ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದಿದ್ದೇಕೆ.  ಕೊಡಗು ಎಸ್.ಪಿ ಏನು ಮಾಡುತ್ತಿದ್ದರು ಎಂದು ಖಾರವಾಗಿ ಪ್ರಶ್ನಿಸಿದರು.

ಈ ಕೃತ್ಯವನ್ನು ರಾಜ್ಯ ಸರ್ಕಾರವೇ ಮಾಡಿಸಿದೆ. ಈ ಬಾರಿ ಕೊಡಗಿನಲ್ಲಿ ಕಾಂಗ್ರೆಸ್ 2 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಹೀಗಾಗಿ ಹತಾಶೆಯಿಂದ ನನ್ನ ವಿರುದ್ಧ ಪ್ರತಿಭಟನೆ ಮಾಡಿಸಲಾಗಿದೆ. ಗೋಬ್ಯಾಕ್ ಅಂದ್ರೆ ಎಲ್ಲಿಗೆ ಹೋಗಲಿ ಎಂದು ಪ್ರಶ್ನಿಸಿದರು.

ಭದ್ರತೆ ನೀಡುವುದು ಪೊಲೀಸರ ಜವಾಬ್ದಾರಿ. ಆದರೆ ಮೂರ್ನಾಲ್ಕು ಕಡೆ ಪ್ರತಿಭಟನೆ ಮಾಡಿದರೂ ಸುಮ್ಮನಿದ್ದಾರೆ.

ಅದೇ ಸಿಎಂ ಬಂದಿದ್ರೆ ಹೀಗೆ ಮಾಡುತ್ತಿದ್ದರಾ. ಕೊಡಗಿನ ಎಸ್ಪಿಗೆ ಯಾವ ರೋಗ ಬಂದಿತ್ತು ಎಂದು ಕಿಡಿಕಾರಿದರು.

ಆಗಸ್ಟ್ 26 ರಂದು ಕೊಡಗಿನಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ನನ್ನ ನೇತೃತ್ವದಲ್ಲೇ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಸಿದ್ಧರಾಮಯ್ಯ ಹೇಳಿದರು.

ಇತಿಹಾಸದಲ್ಲಿ 40 ಪರ್ಸೆಂಟ್ ಸರ್ಕಾರ ಎಂದೂ ಬಂದಿರಲಿಲ್ಲ. ಕೋಮುವಾದಿ ಸರ್ಕಾರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಕೊಲೆಯಾಗಿತ್ತು.

ಸಿಎಂ ಬೊಮ್ಮಾಯಿ ಕೇವಲ ಪ್ರವೀಣ್ ಮನೆಗೆ ಹೋಗಿ ಬಂದ್ರು ಕೊಲೆಯಾದ ಫಾಜಿಲ್ ಮತ್ತು  ಮಸೂದ್ ಮನೆಗೆ ಹೋಗಲಿಲ್ಲ.

ಕೇವಲ ಪ್ರವೀಣ್ ಕುಟುಂಬಸ್ಥರಿಗೆ ಮಾತ್ರ ಪರಿಹಾರ ನೀಡಿದ್ರು. ಪರಿಹಾರವನ್ನ ಸಿಎಂ ಬೊಮ್ಮಾಯಿ ತಮ್ಮ ಜೇಬಿನಿಂದ ನೀಡಲಿಲ್ಲ ಜನಸಾಮಾನ್ಯರ ತೆರಿಗೆ ದುಡ್ಡಿನಿಂದ ಎಂದು ಸಿದ್ದು ಕಿಡಿಕಾರಿದರು.