ಬೆಂಗಳೂರು: ಎರಡೂ ರಾಷ್ಟ್ರೀಯ ಪಕ್ಷಗಳು ಕೊಡಗಿನ ಜನರ ಬದುಕಿನ ಜತೆ ಚೆಲ್ಲಾಟ ಆಡುತ್ತಿವೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಪ್ರಕೃತಿ ಸೌಂದರ್ಯವುಳ್ಳ ಕೊಡಗನ್ನು ಜಮ್ಮು ಮತ್ತು ಕಾಶ್ಮೀರವನ್ನಾಗಿ ಮಾಡಲು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೊಡಗಿನಲ್ಲಿ ಶಾಂತಿ ಕಾಪಾಡಲು ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ. ಜತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಿ ಎಂದಿದ್ದೇನೆ ಎಂದು ಹೇಳಿದರು.
ಸರಕಾರ ಜಾರಿ ಮಾಡಿರುವ ನಿಷೇಧಾಜ್ಞೆ ತೆರವಾದ ನಂತರ ಮಡಿಕೇರಿಯಲ್ಲಿ ಸರ್ವಜನಾಂಗದ ಶಾಂತಿಯ ತೋಟ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಇದೇ ವೇಳೆ ಎಚ್ ಡಿ ಕೆ ಹೇಳಿದರು.
ಕರಾವಳಿಯ ರೀತಿಯಲ್ಲೇ ಕೊಡಗಿನಲ್ಲಿಯೂ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಆಗುತ್ತಿದೆ. ಇದಕ್ಕೆ ಪ್ರೋತ್ಸಾಹ ಕೊಡಬಾರದು ಎಂದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ತಿಳಿಸಿದರು.
ಕೊಡಗಿನಲ್ಲಿ 144 ಸೆಕ್ಷನ್ ಮುಗಿದ ನಂತರ ನಾನು ಮತ್ತು ನಮ್ಮ ಪಕ್ಷದ ಅಧ್ಯಕ್ಷರಾದ ಸಿಎಂ ಇಬ್ರಾಹಿಂ ಸೇರಿ ಕೊಡಗಿಗೆ ಹೋಗುತ್ತೇವೆ.ಅಲ್ಲಿ ಶಾಂತಿ ಸಭೆ ನಡೆಸುತ್ತೇವೆ ಎಂದು ಹೇಳಿದರು.
ಕೊಡಗಿನಲ್ಲಿ ಇತಿಹಾಸ ಕೆದಕಿ ಕಚ್ಚಾಡುವುದು ಬೇಡ. ಹಿಂಸೆ ಯಾರಿಗೂ ಒಳ್ಳೆಯದಲ್ಲ. ದೇಶಕ್ಕೆ ಮಹಾವೀರರನ್ನು ಕೊಟ್ಟ ನೆಲದಲ್ಲಿ ಕ್ಷುಲ್ಲಕ ವಿಷಯಗಳ ವಿಜೃಂಭಣೆ ನಡೆಯುತ್ತಿದೆ.
ಕಾಂಗ್ರೆಸ್, ಬಿಜೆಪಿ ರಾಜಕೀಯಕ್ಕಾಗಿ ಇಂಥ ಒಡಕು ಮೂಡಿಸುತ್ತಿವೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಕೊಡಗು ಪ್ರತಿ ವರ್ಷ ಮಳೆ, ನೆರೆಯಿಂದ ಸಂಕಷ್ಟ ಅನುಭವಿಸುತ್ತಿದೆ. ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹೋಂ ಸ್ಟೇ ಗಳು ಖಾಲಿ ಬಿದ್ದಿವೆ. ಜನರ ಬದುಕು ಕಷ್ಟದಲ್ಲಿದೆ.
ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸರಕಾರದ ಕರ್ತವ್ಯ. ಆದರೆ, ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಕೇವಲ ಕೊಡಗನ್ನು ಕೋಮು ದಳ್ಳುರಿಗೆ ತಳ್ಳುವ ಕೆಲಸ ಮಾಡುತ್ತಿವೆ ಎಂದು ಕಿಡಿ ಕಾರಿದರು.