ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಸೆರೆ

ಹುಬ್ಬಳ್ಳಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಪಿಟಿಸಿಎಲ್ ಕಿರಿಯ ಅಭಿಯಂತರ ಆಯ್ಕೆಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ನನ್ನು ಬೆಳಗಾವಿ ಜಿಲ್ಲಾ ಪೊಲೀಸರು  ಬಂಧಿಸಿದ್ದಾರೆ.

ಇದೀಗ ಬಂಧಿತರ ಸಂಖ್ಯೆ 13ಕ್ಕೇರಿದೆ. ಈ ಪರೀಕ್ಷೆಯ ಅಕ್ರಮದ ಕಿಂಗ್​ ಪಿನ್​ ಜಿಲ್ಲೆಯ ಗೋಕಾಕ್​ ತಾಲೂಕಿನ ಸಂಜೀವ ಲಕ್ಷ್ಮಣ ಭಂಡಾರಿಯನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಪೊಲೀಸರು ಗೋಕಾಕ್​ನ ಪ್ರಿನ್ಸಿಪಲ್ ಜೆಎಂಎಫ್‌ಸಿ ನ್ಯಾಧೀಶರ ಮುಂದೆ ಹಾಜರುಪಡಿಸಿದರು.

ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು 7ದಿನಗಳ ವರೆಗೆ  ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಕಳೆದ‌ ಆ.07ರಂದು ಕೆಪಿಟಿಸಿಎಲ್‌ನ ಕಿರಿಯ ಅಭಿಯಂತರ (ಜೆಇ) ನೇಮಕಾತಿ ಪರೀಕ್ಷೆ ನಡರದಿತ್ತು.

ಗೋಕಾಕ್​ ನಗರದ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಆರೋಪಿ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ ಎಂಬಾತ ಸ್ಮಾರ್ಟ್ ವಾಚ್‌ನ ಕ್ಯಾಮೆರಾ ಮೂಲಕ ಪ್ರಶ್ನೆಪತ್ರಿಕೆಯನ್ನು ಫೋಟೋ ತೆಗೆದು ಟೆಲಿಗ್ರಾಂ ಮೂಲಕ ಪ್ರಮುಖ ಆರೋಪಿ ಸಂಜೀವ ಭಂಡಾರಿಗೆ ರವಾನಿಸಿದ್ದರು ಎಂಬ ಆರೋಪವಿದೆ.

ಈ ಅಕ್ರಮದ ಕುರಿತು ಗೋಕಾಕ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಸಂಜೀವ ಭಂಡಾರಿ ತಲೆಮ ರೆಸಿಕೊಂಡಿದ್ದರು.

ಅಲ್ಲದೇ ವಕೀಲರ ಮೂಲಕ ಎರಡು ಬಾರಿ ಜಾಮೀನಿಗಾಗಿ ಸಂಜು ಭಂಡಾರಿ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಆರೋಪಿಯ ಅರ್ಜಿಯನ್ನು ತಿರಸ್ಕರಿಸಿತ್ತು.

ಆರೋಪಿ ಸಂಜೀವ ಭಂಡಾರಿ ಪರೀಕ್ಷಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬ್ಲೂಟೂತ್‌ ಡಿವೈಸ್​ಗಳನ್ನು ರವಾನಿಸುತ್ತಿದ್ದರು.

ಈಗ ಪೊಲೀಸರು ಬ್ಲೂಟೂತ್ ಡಿವೈಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಸಂಜೀವ ಪೊಲೀಸ್ ಕಾನ್ಸ್​​ಟೇಬಲ್​ ಮಗನಾಗಿದ್ದು, ಈ ಹಿಂದೆ ನಡೆದ ಪೊಲೀಸ್ ಕಾನ್ಸ್​ಟೇಬಲ್​ ಪರೀಕ್ಷೆ ಅಕ್ರಮದಲ್ಲೂ ಜೈಲಿಗೆ ಜಾಮೀನಿನ ಮೇಲೆ ಬಂದಿದ್ದ.

ಜೈಲಿನಿಂದ ಬಂದ ನಂತರ ಹಳೆಯ ಚಾಳಿ ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.