ಮಳೆರಾಯನ ಆರ್ಭಟ: ಸಾವು; ಹಲವೆಡೆ ರಸ್ತೆ ಸಂಪರ್ಕ ಕಡಿತ

ವರದಿ:ರಾಮಸಮುದ್ರ ಎಸ್‌.ವೀರಭದ್ರಸ್ವಾಮಿ
ಚಾಮರಾಜನಗರ: ತಡ ರಾತ್ರಿ ಸುರಿದ ಧಾರಾಕಾರ ಮಳೆಗೆ ಚಾಮರಾಜನಗರದ ಸ್ಥಿತಿ ಮತ್ತೆ ಅಯೋಮಯವಾಗಿದೆ. ಎಲ್ಲಿ ನೋಡಿದರೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. 
ಜಿಲ್ಲಾ ಕೇಂದ್ರವೂ ಸೇರಿದಂತೆ ಚಾಮರಾಜನಗರ ತಾಲೂಕು ಮಳೆಗೆ ತತ್ತರಿಸಿದೆ.
 ಬಿ‌.ರಾಚಯ್ಯ ಜೋಡಿರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್​​ಗೆ ನೀರು ನುಗ್ಗಿದ್ದು ನಾಲ್ಕೈದಡಿ ನೀರು ನಿಂತಿದೆ. ಇಂದಿರಾ ಕ್ಯಾಂಟೀನ್​ಗೆ ಯಾರೂ ಕಾಲಿಡಲು ಸಾಧ್ಯವಿಲ್ಲದ ಕಾರಣ ಇಂದು ರಜೆ ಘೋಷಣೆ ಮಾಡುವಂತೆ ಮಳೆರಾಯ ಮಾಡಿದ್ದಾನೆ.
ನಗರದ ಸತ್ಯಮಂಗಲಂ ರಸ್ತೆಯಲ್ಲಿ‌ರುವ ಕಲ್ಯಾಣ ಮಂಟಪವೊಂದಕ್ಕೆ ನದಿಯಂತೆ ನೀರು ಹರಿದಿದ್ದು ಮದುವೆ ಮನೆ ನೀರಿನ ಮನೆಯಾಗಿ ಬದಲಾಗಿದೆ. ಅಡುಗೆ ಕೋಣೆಯಲ್ಲಿದ್ದ ತರಕಾರಿಗಳು ತೇಲುತ್ತಿವೆ. ಮೊಣಕಾಲುದ್ದ ನೀರಿನಲ್ಲಿ ಬಾಣಸಿಗರು ಅಸಹಾಯಕರಾಗಿ ನಿಂತಿದ್ದರು‌
ದೇವಾಲಯವನ್ನ ಬಿಡದ ವರುಣ: ಚಾಮರಾಜನಗರ ತಾಲ್ಲೋಕಿನ ಹರದನಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ದಿವ್ಯಲಿಂಗೇಶ್ವರ ದೇವಾಲಯಕ್ಕೂ ನೀರು ನುಗ್ಗಿದೆ. 
ರಾಮಸಮುದ್ರದ ಸಮೀಪ ಇರುವ ಹರಳುಕೋಟೆ ದೇವಾಲಯದ ಆವರಣ, ರಸ್ತೆಗೂ ನೀರು ಹರಿದಿದೆ.
ಲೊಕ್ಕನಹಳ್ಳಿ ಮಾರ್ಗ ಮಧ್ಯೆ ಸಿಗುವ ತಟ್ಟೆಹಳ್ಳಕ್ಕೆ ಸೇತುವೆ ನಿರ್ಮಾಣ ಹಂತದಲ್ಲಿದ್ದು, ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. 
ಕಾಳನಹುಂಡಿ ಸಂಪರ್ಕಿಸುವ ರಸ್ತೆಯೂ ನೀರಿನ ರಭಸಕ್ಕೆ ಕೊರೆದುಕೊಂಡು ಹೋಗಿ ಹಾಳಾಗಿದೆ. ಪರಿಣಾಮ, 3-4 ಗ್ರಾಮಗಳಿಗೆ ರಸ್ತೆ ಸಂಪರ್ಕವಿಲ್ಲದಂತೆ ಆಗಿದೆ. 
ಚಾಮರಾಜನಗರ ರಾಮಸಮುದ್ರ ಕೊಡಿಮೊಳೆ ಸಂಪರ್ಕದ ಕೆರೆ ಕೋಡಿ ಬಿದ್ದು ಸಂಪರ್ಕ ಕಡಿತವಾಗಿದೆ.ಚಾಮರಾಜನಗರ ತಾಲೂಕಿನ ಬೂದಿಪಡಗ ಸೇತುವೆ ಮುಳುಗಡೆಯಾಗಿ ಸೇತುವೆ ಮೇಲೆ 3 ಅಡಿ ನೀರು ನೀರು ಹರಿಯುತ್ತಿದ್ದು ಸಂಚಾರ ಸಂಪೂರ್ಣ ಬಂದ್ ಆಗಿದೆ.
ಸೇತುವೆ ಮುಳುಗಡೆ:  ಮೊದಲೇ ಮಳೆ ಆರ್ಭಟಕ್ಕೆ ಪಾರ್ಶ್ವಭಾಗ ಕುಸಿತ ಕಂಡಿದ್ದ ಸೇತುವೆ ಇದೀಗ ಮುಳುಗಡೆ ಆಗಿದ್ದು ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಜೊತೆಗೆ, ಸೇತುವೆ ಮೇಲೆ ವಿದ್ಯುತ್ ಕಂಬ ಕೂಡ ಬಿದ್ದಿದ್ದು ಜನರು ಸೇತುವೆ ಬಳಿ ಸುಳಿಯದೇ ಆತಂಕದಲ್ಲಿದ್ದಾರೆ‌.
ಗ್ರಾಮದಲ್ಲಿರುವ ಕಿತ್ತೂರು ಚೆನ್ನಮ್ಮ, ಆಶ್ರಮ ಶಾಲೆಗಳ ಶಿಕ್ಷಕರು, ಕೂಲಿ ಕಾರ್ಮಿಕರು ಸೇತುವೆ ದಾಟಲಾಗದೇ ಅಸಹಾಯಕರಾಗಿ ನಿಂತಿದ್ದಾರೆ. ಸೇತುವೆಯನ್ನು ದುರಸ್ತಿ ಮಾಡಿ ಎತ್ತರಿಸದಿದ್ದರೆ ಮಳೆ ಬಂದಾಗಲೆಲ್ಲ ಇದೇ ಗೋಳು ಮುಂದುವರೆಯಲಿದ್ದು ಸೇತುವೆ ದುರಸ್ತಿಪಡಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಿರಂತರವಾಗಿ ರಾತ್ರಿ ಸುರಿದ ಮಳೆಗೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣೆಯ ಆವರಣ ಕೆರೆಯಂತಾಗಿದೆ. ಪೊಲೀಸ್ ಜೀಪ್‌ಗಳು ಕೆರೆಯಲ್ಲಿ ನಿಂತಂತೆ ಕಾಣುತ್ತಿವೆ. ರಾಷ್ಟ್ರೀಯ ಹೆದ್ದಾರಿ ಮೇಲೆಲ್ಲ ನೀರು ಹರಿಯುತ್ತಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ಗೋಡೆ ಕುಸಿದು ಸಾವು: ಮನೆಗೋಡೆ ಕುಸಿದು ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ನಡೆದಿದೆ. 
ದಡದಹಳ್ಳಿ ಗ್ರಾಮದ ಮೂರ್ತಿ(32) ಮೃತ ದುರ್ದೈವಿ.
ಮಲಗಿದ್ದಾಗ ನಿರಂತರ ಮಳೆಯಿಂದಾಗಿ ಮನೆಗೋಡೆ ತಲೆಯ ಮೇಲೆ ಬಿದ್ದು ಸ್ಥಳದಲ್ಲೇ ಮೂರ್ತಿ ಮೃತಪಟ್ಟಿದ್ದಾರೆ‌. 
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.