ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 32 ಕಡೆ ಎನ್ ಐಎ ದಾಳಿ; ಮಹತ್ವದ ದಾಖಲೆ ವಶ

ಮಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಎನ್ ಐಎ ಅಧಿಕಾರಿಗಳು 32 ಕಡೆ ದಿಢೀರ್ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.
ಬೆಳ್ಳಾರೆ, ಸುಳ್ಯ, ಪುತ್ತೂರು, ಮಂಗಳೂರು, ಮಡಿಕೇರಿ ಸೇರಿದಂತೆ ಹಲವು ಕಡೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿ ಶೋಧ ನಡೆಸಿದೆ.
5ಕ್ಕೂ ಹೆಚ್ಚು ವಾಹನಗಳಲ್ಲಿ ಬಂದ ಅಧಿಕಾರಿಗಳು, ಬೆಳಿಗ್ಗೆ 6 ಗಂಟೆಯಿಂದಲೇ ತನಿಖೆ ಆರಂಭಿಸಿದ್ದಾರೆ.
ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಕೊಲೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ಪಾತ್ರವಿದೆ ಎಂದು ಶಂಕಿಸಲಾದ ಹಲವಾರು ವ್ಯಕ್ತಿಗಳ ಮನೆ ಮತ್ತು ವ್ಯಾಪಾರ ಸಂಸ್ಥೆಗಳ ಮೇಲೆ ಎನ್‍ಐಎ ತಂಡ ದಾಳಿ ನಡೆಸಿದೆ.
ಎನ್‍ಐಎ ದಾಳಿಯ ಬಗ್ಗೆ ಗೃಹ ಇಲಾಖೆ ದೃಢಪಡಿಸಿದ್ದು, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದೆ. 
ಪ್ರಕರಣದ ತನಿಖೆ ನಡೆಸುತ್ತಿರುವ ಎನ್‍ಐಎ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಸುಳ್ಯ ಹಾಗೂ ಪುತ್ತೂರು ತಾಲೂಕಿನ 32 ಕಡೆ ಮನೆಗಳು ಹಾಗು ಇತರೆ ಕಟ್ಟಡಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಎನ್‍ಐಎಗೆ ಕರ್ನಾಟಕ ಪೊಲೀಸರು ಸಹಕಾರ ನೀಡಿದ್ದಾರೆ. 
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಪ್ರವೀಣ್ ಕುಮಾರ್ ನೆಟ್ಟಾರು (31), ಜುಲೈ 26ರಂದು ರಾತ್ರಿ ಅಂಗಡಿ ಮುಚ್ಚಿ ಮನೆಗೆ ಹೊರಟಿದ್ದರು.
ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. 
ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಸಾವನ್ನಪ್ಪಿದ್ದರು.
ಪ್ರವೀಣ್ ನೆಟ್ಟಾರು ಹತ್ಯೆಯು ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿತ್ತು. ಒತ್ತಡಕ್ಕೆ ಮಣಿದ ಸರ್ಕಾರ ತನಿಖೆಯನ್ನು ಎನ್‍ಐಎಗೆ ವಹಿಸಿದೆ. 
ಎನ್‍ಐಎ ಪ್ರಕರಣವನ್ನು ವಹಿಸಿಕೊಳ್ಳುವ ಮುನ್ನವೇ ಸ್ಥಳೀಯ ಪೊಲೀಸರು ಕೊಲೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿದ್ದರು.
ನೆಟ್ಟಾರು ಹತ್ಯೆಯಿಂದ ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಆಕ್ರೋಶ ಭುಗಿಲೆದ್ದಿತ್ತು 
ತನಿಖೆಯಲ್ಲಿ ಸರ್ಕಾರ ವಿಫಲವಾಗಿದೆ, ಕಾರ್ಯಕರ್ತರ ಹಿತ ಕಾಯಲು ಪಕ್ಷ ವಿಫಲವಾಗಿದೆ ಎಂದು ಆರೋಪಿಸಿ ಹಲವಾರು ಬಿಜೆಪಿ ಪದಾಧಿಕಾರಿಗಳೇ ರಾಜೀನಾಮೆ ನೀಡಿದ್ದರು.