ಜಿಲ್ಲಾಸ್ಪತ್ರೆ ಹಳೆ ಕಟ್ಟಡದಲ್ಲೂ ಓಪಿಡಿ ಸೇವೆ ಲಭ್ಯ

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ 
ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಹಳೆ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಆಡಳಿತ ಇಂದಿನಿಂದ (ಸೋಮವಾರ) ಹೊರರೋಗಿ ವಿಭಾಗಗಳನ್ನು ಮತ್ತೆ ಆರಂಭಿಸಿದೆ
ಕಳೆದ ಅಕ್ಟೋಬರ್‌ನಲ್ಲಿ ಯಡಬೆಟ್ಟದಲ್ಲಿ ಸಿಮ್ಸ್ ಬೋಧನಾ ಆಸ್ಪತ್ರೆ ಉದ್ಘಾಟನೆ ಆದ ಬಳಿಕ ಹೆರಿಗೆ ಮತ್ತು ಮಕ್ಕಳ ವಿಭಾಗಗಳನ್ನು ಬಿಟ್ಟು ಉಳಿದೆಲ್ಲಾ ವಿಭಾಗಗಳನ್ನು ಯಡಬೆಟ್ಟದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅದಾದ ನಂತರ ಹಳೆ ಜಿಲ್ಲಾಸ್ಪತ್ರೆಯನ್ನ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿದ್ದರು. ಕೊವೆಡ್ ರೋಗಿಗಳು ಉಳಿಯದೆ ಇದ್ದರಿಂದ ಕಟ್ಟಡ ಖಾಲಿ ಬಿದ್ದಿತು. 
ಜಿಲ್ಲಾಸ್ಪತ್ರೆ ಯಡಪುರ ಬಳಿ ಇರೊ ಸಿಮ್ಸ್ ಅತ್ತ ಸಾಗುತ್ತಿದ್ದಂತೆ ಸ್ಥಳೀಯವಾಗಿ ನರಕಯಾತನೆ ಅನುಭವಿಸುತ್ತಾ ಬರಲಾರಂಭಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಮೊದಲಿನಂತೆ ವೈದ್ಯಕೀಯ ಸೇವೆ ಲಭ್ಯವಾಗಬೇಕು ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಹಲವು ಸಂಘಟನೆಗಳು ಪ್ರತಿಭಟನೆಯನ್ನೂ ಮಾಡಿದ್ದವು.
ಚಾಮರಾಜನಗರದಿಂದ 8 ಕಿ.ಮೀ ದೂರದಲ್ಲಿರುವ ಯಡಬೆಟ್ಟಕ್ಕೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹೋಗುವ ಅನಿವಾರ್ಯತೆ ಬಗ್ಗೆ ರೋಗಿಗಳು ಅಳಲು ತೋಡಿಕೊಂಡಿದ್ದರು. ಮಾಧ್ಯಮಗಳು ಕೂಡ ಈ ಬಗ್ಗೆ  ಆರಂಭದಲ್ಲಿ ಬೆಳಕು ಚೆಲ್ಲಿದ್ದವು.  
ಕಳೆದ ಹದಿನೈದು ದಿನದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಳೆ, ಪ್ರವಾಹ ಹಾನಿ ಸಂಬಂಧ ನಡೆಸಿದ್ದ ಅಧಿಕಾರಿಗಳ ಸಭೆಯಲ್ಲಿ  ಈ ವಿಚಾರವಾಗಿ ಪ್ರಸ್ತಾಪಿಸಿ ಜಿಲ್ಲಾಸ್ಪತ್ರೆಯ ಹಳೆ ಕಟ್ಟಡದಲ್ಲಿ ಮತ್ತೆ ಚಿಕಿತ್ಸೆ ಆರಂಭಿಸಲು ಸಿಮ್ಸ್ ಡೀನ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.
ಸಚಿವರ ಸೂಚನೆಯಂತೆ ಸಿಮ್ಸ್ ಆಡಳಿತ ಸೋಮವಾರದಿಂದ ನಗರದ ಹಳೆ ಕಟ್ಟಡದಲ್ಲಿ ಹೊರ ರೋಗಿಗಳ ವಿಭಾಗ ಆರಂಭಿಸಲಿದೆ. ಕೆಲವು ದಿನಗಳ ನಂತರ ತುರ್ತು ಚಿಕಿತ್ಸಾ ವಿಭಾಗವನ್ನೂ ತೆರೆಯಲಿದೆ. 
'ಎಲ್ಲ ವಿಭಾಗಗಳ ಹೊರ ರೋಗಿಗಳ ಘಟಕವನ್ನು ನಗರದ ಕಟ್ಟಡದಲ್ಲಿ ತೆರೆಯಲು ಡೀನ್ ಅವರು ಸೂಚಿಸಿದ್ದಾರೆ. ತುರ್ತು ಘಟಕ ತಕ್ಷಣಕ್ಕೆ ಆರಂಭವಾಗುವುದಿಲ್ಲ. ಅದಕ್ಕೆ ಸ್ವಲ್ಪ ಸಮಯ ಹಿಡಿಯಲಿದೆ' ಎಂದು ಜಿಲ್ಲಾ ಸರ್ಜನ್ ಡಾ.ಎಚ್.ಎಸ್.ಕೃಷ್ಣಪ್ರಸಾದ್  ತಿಳಿಸಿದ್ದಾರೆ.
'ನಮ್ಮಲ್ಲಿ ವೈದ್ಯರ ಕೊರತೆ ಇಲ್ಲ. ಆದರೆ ಸಿಬ್ಬಂದಿ ಕೊರತೆ ಇದೆ. ಈ ಕಾರಣಕ್ಕೆ ಯಡಬೆಟ್ಟದ ಹೊಸ ಬೋಧನಾ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ನಗರದ ಹಳೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದ್ದಾರೆ. ಅದರಂತೆ ಅಲ್ಲೂ ಚಿಕಿತ್ಸೆ ಆರಂಭಿಸಲಾಗುತ್ತಿದೆ' ಎಂದು ಡೀನ್ ಡಾ.ಜಿ.ಎಂ.ಸಂಜೀವ್ ಪ್ರತಿಕ್ರಿಯಿಸಿಧಾರೆ.
ಸಿಬ್ಬಂದಿ ಇಲ್ಲದಿದ್ದರೆ ಕಷ್ಟ: 'ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ನರ್ಸ್ ಹಾಗೂ ಇತರ ಸಿಬ್ಬಂದಿ ಇಲ್ಲದಿದ್ದರೆ ಎರಡೂ ಕಡೆಗಳಲ್ಲಿ ಆಸ್ಪತ್ರೆ ನಡೆಸುವುದು ಕಷ್ಟ. ಹಲವು ಬಾರಿ ಸರ್ಕಾರಕ್ಕೆ ಸಿಬ್ಬಂದಿ ನೇಮಕಾತಿಗೆ ಅನುಮತಿ ನೀಡುವಂತೆ ಕೋರಿದರೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಸಚಿವರು ಸಿಬ್ಬಂದಿ ನೇಮಕಾತಿಗೆ ಅವಕಾಶ ಮಾಡಿಕೊಡಬೇಕು. ಆಗ ಯಾವುದೇ ಸಮಸ್ಯೆ ಇರುವುದಿಲ್ಲ. ಇಲ್ಲದಿದ್ದರೆ, ಎರಡೂ ಕಡೆ ನಿರ್ವಹಣೆ ತುಂಬಾ ಕಷ್ಟವಾಗಲಿದೆ' ಎಂದು ಹೇಳುತ್ತಾರೆ ವೈದ್ಯಾಧಿಕಾರಿಗಳು.   
ಪಟಾಕಿ ಸಿಡಿಸಿ ಸಂಭ್ರಮ: ಜೋಡಿರಸ್ತೆ ಹಳೆ ಕಟ್ಟಡದಲ್ಲಿ ಓಪಿಡಿ ಸೌಲಭ್ಯ ಕಲ್ಪಿಸಲು ಸಚಿವರು ಸೂಚಿಸಿದ ಹಿನ್ನಲೆಯಲ್ಲಿ  ಕೆಲ ಹೋರಾಟಗಾರರು ಪಟಾಕಿ ಸಿಡಿಸಿ ಸಂಭ್ರಮಿಸಿದರು.    
ಸಣ್ಣ ಪುಟ್ಟ ರೋಗಗಳಿಗೂ ದೂರದ ಸಿಮ್ಸ್ ಗೆ ಹೋಗಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯ ಎದುರಾದ ಹಿನ್ನಲೆಯಲ್ಲಿ ಆರಂಭಿಕವಾಗಿ ಕದಂಬ ಸೇನೆ ಹಾಗೂ ಎಸ್ಡಿಪಿಐ ಪ್ರತಿಭಟನೆ ಮಾಡಿ ಗಮನಸೆಳೆದಿದ್ದರು‌. ಇದೀಗ ಹೋರಾಟಗಾರ  ಮನವಿ ಮೇರೆಗೆ ಪತ್ರ ವ್ಯವಹಾರ ಮಾಡಿ ಓಪಿಡಿ ಸೌಲಭ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದರೆಂದು  ಸಚಿವರಿಗೆ ಧನ್ಯವಾದಗಳು ಅರ್ಪಿಸಿದರು.    
ರೋಗಿಗಳ ಪರದಾಟ: ಜಿಲ್ಲಾ ಪಟ್ಟಣ ಕೇಂದ್ರದಲ್ಲಿ ಓಪಿಡಿ ಸೌಲಭ್ಯ ದೊರೆಯುತ್ತದೆ ಎಂಬ ಸುದ್ದಿ ಕೇಳಿ ಬಹುತೇಕ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ ಹಾಗೂ ಹೆಚ್ಚು ಹೆಚ್ಚು ರೋಗಿಗಳು ದೌಡಾಯಿಸಿದ್ದಾರೆ‌. ಮತ್ತೊಂದೆಡೆ ಯಾವ ವೈದ್ಯರು ಎಲ್ಲಿ ಸಿಗುತ್ತಾರೆ ಎಂಬುದು ಮಾತ್ರ ಸೂಕ್ತ ಮಾರ್ಗದರ್ಶನ ಇಲ್ಲದೆ ಪರಡಾಡುತ್ತಿದ್ದದ್ದು ಕಂಡು ಬಂದಿತು. ಮತ್ತೊಂದೆಡೆ  ವೈದ್ಯರುಗಳು ಸಣ್ಣ ಬಿಳಿ ಹಾಳೇಲಿ ಮೆಡಿಸನ್ ವಿವರ ಹಾಗೂ ಹೊರಗಡೆ ಮೆಡಿಕಲ್ ಸ್ಟೋರ್ ಗೆ ಬರೆದು ಕೊಡುವ  ಹಳೆ ಚಾಳಿ ಮುಂದುವರೆದಿದೆ ಎನ್ನಬಹುದು.        
ಉಸ್ತುವಾರಿ ಸಚಿವರು, ಆರೋಗ್ಯ ಇಲಾಖೆ, ಹಾಗೂ ಜಿಲ್ಲಾದಿಕಾರಿಗಳಿಗೊಂದಷ್ಟು ಮನವಿ: ಹಳೆ ಕಟ್ಟಡದಲ್ಲಿ ಓಪಿಡಿ ಸೌಲಭ್ಯ ಮುಂದುವರೆಸುವುದು ಖಚಿತವಾದ ಬೆನ್ನಲ್ಲೇ ಯಾವ ವೈದ್ಯರು, ಯಾವ ಕೊಠಡಿಯಲ್ಲಿ ಸಿಗಲಿದ್ದಾರೆ ಎಂಬ ಮಾಹಿತಿ ಜೊತೆಗೆ ಯಾವ ಔಷದ ಸಿಗುತ್ತದೆ, ಸಿಗುವುದಿಲ್ಲ ಎಂಬುದರ ವಿವರ ಹಾಕುವುದು ಸೂಕ್ತವಾಗಿದೆ. ಅಲ್ಲದೆ ವೈದ್ಯರು ಆಸ್ಪತ್ರೆಯವರೆ ಮುದ್ರಣ ಮಾಡಿಸಿದ ಓಪಿಡಿ ಸ್ಲಿಪ್ ಅಲ್ಲೆ ಮೆಡಿಷನ್ ಬರೆದು ಕೊಡುವಂತೆ ಹಾಗೂ ಅದು ಆಸ್ಪತ್ರೆಯಲ್ಲಿ ದೊರೆಯುವಂತೆ ನೋಡಿಕೊಳ್ಳುವುದು. ಹಾಗೂ ಹೊರಗಡೆ ಮೆಡಿಷನ್ ಬರೆದುಕೊಟ್ಟ ವೈದ್ಯರ ಮೇಲೆ ಕ್ರಮ ಜರುಗಿಸಬೇಕಾಗಿದೆ.