(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಗಣೇಶನ ಮೂರ್ತಿ ವಿಸರ್ಜನಾ ವೇಳೆ ಡಿಜೆ ಆಫ್ ಮಾಡಿ ಎಂದಿದ್ದಕ್ಕೆ ಪೊಲೀಸರ ಮೇಲೆ ಯುವಕರ ಗುಂಪೊಂದು ಕಲ್ಲು ತೂರಾಡಿದ ಘಟನೆ ಚಾಮರಾಜನಗರದಲ್ಲಿ ತಡರಾತ್ರಿ ನಡೆದಿದೆ.
ಚಾಮರಾಜನಗರ ಪಟ್ಟಣದ ಉಪ್ಪಾರ ಬೀದಿ ಸಂತೇಮರಹಳ್ಳಿ ವೃತ್ತದ ಸಮೀಪ ಇರುವ ಗಣಪತಿಯನ್ನು ಭಾನುವಾರ ವಿಸರ್ಜನೆ ಮಾಡಲಾಗುತ್ತಿತ್ತು.
ರಾತ್ರಿ 11 ಗಂಟೆ ಆದರೂ ಡಿಜೆ ಸೌಂಡ್ ಆಫ್ ಮಾಡದೇ ಮೆರವಣಿಗೆಯಲ್ಲಿ ಯುವಕರು ಕುಣಿಯುತ್ತಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಪೊಲೀಸರು ಡಿಜೆ ಆಫ್ ಮಾಡಿ ಎಂದಿದ್ದಾರೆ.
ಇದರಿಂದ ಕುಪಿತಗೊಂಡ 15ಕ್ಕೂ ಹೆಚ್ಚು ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಘಟನೆಯಲ್ಲಿ ಪಿಎಸ್ಐ ಮಹದೇವ್ ಅವರಿಗೆ ತೀವ್ರತರ ಗಾಯಗಳಾಗಿದ್ದರೆ, ಎಎಸ್ಐ ಶಿವಶಂಕರ್, ಪೊಲೀಸ್ ವಾಹನದ ಚಾಲಕರೊಬ್ಬರಿಗೆ ಕಾಲು, ಕೈಗಳಿಗೆ ಗಾಯಗಳಾಗಿದೆ.
ಈ ಘಟನೆ ಸಂಬಂಧ ಎಎಸ್ಐ ಶಿವಶಂಕರ್ ಪಟ್ಟಣ ಠಾಣೆಗೆ ದೂರು ನೀಡಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.