ವ್ಯಕ್ತಿಯ ಬೆದರಿಸಿ ಹಣ ಕಿತ್ತಿದ್ದ ನಿವೃತ್ತ ಹೆಡ್ ಕಾನ್ಸ್ ಟೇಬಲ್ ಅಂದರ್

ನವದೆಹಲಿ: ಬೇಲಿಯೇ ಎದ್ದು ಹೊಲ ಮೈಯ್ದಂತೆ ದೆಹಲಿಯಲ್ಲೊಂದು ಘಟನೆ ನಡೆದಿದೆ.
ವ್ಯಕ್ತಿಯೊಬ್ಬರನ್ನು ಬೆದರಿಸಿ ಹಣ ವಸೂಲಿ ಮಾಡಿದ ಹಿನ್ನೆಲೆಯಲ್ಲಿ ದೆಹಲಿ ನಿವೃತ್ತ ಪೊಲೀಸ್ ಹೆಡ್‍ ಕಾನ್ಸ್ ಟೇಬಲ್ ನನ್ನು ಬಂಧಿಸಲಾಗಿದೆ.
ಜೈ ಭಗವಾನ್ (60) ಬಂದಿತ ಆರೋಪಿ.
ಸಮಯಪುರ ಬದ್ಲಿ ಸ್ಟೇಷನ್ ಹೌಸ್ ಆಫೀಸರ್ ಎಂದು ಪರಿಚಯಿಸಿಕೊಂಡ ಈ ಮಹಾಶಯ ರೋಹಿಣಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಂದ ಹಣ ವಸೂಲಿ ಮಾಡಿದ. 
ಈತ ಕಳೆದ ಆಗಸ್ಟ್ 31 ರಂದು ಸೇವೆಯಿಂದ ನಿವೃತ್ತರಾಗಿದ್ದಾನೆ. ಕೆಲ ವಿಚಾರಣೆ ಹಂತದ ಪ್ರಕರಣಗಳ ಬಗ್ಗೆ ತಿಳಿದಿದ್ದ ಈತ ಅದರ ಲಾಭ ಪಡೆದು ಸುಲಿಗೆಗೆ ಇಳಿದಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಣಕಾಸಿನ ವ್ಯಾಜ್ಯ ಕುರಿತು ಕಳೆದ ಶನಿವಾರದ ಮಹಿಳೆಯೊಬ್ಬರು ದಕ್ಷಿಣ ರೋಹಿಣಿ ಪೊಲೀಸ್ ಠಾಣೆಗೆ ಬಂದು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಕೂಡಲೆ ಎಚ್ಚೆತ್ತ ಪೊಲೀಸರು ಯೋಜನೆ ರೂಪಿಸಿ ರೋಹಿಣಿ ಸೆಕ್ಟರ್ -2ನ ಆಸ್ಪತ್ರೆ ಬಳಿ ವ್ಯಕ್ತಿಯೊಬ್ಬರಿಗೆ ಭೇಟಿಯಾಗುವಂತೆ ಜೈ ಭಗವಾನ್ ಗೆ ಕರೆ ಮಾಡಿಸಿದ್ದಾರೆ.
ಇನ್ಸ್‍ಪೆಕ್ಟರ್ ಸಮವಸ್ತ್ರ ತೊಟ್ಟು ಜೈ ಭಗವಾನ್ ಪೋಸು ನೀಡುತ್ತಿದ್ದ. 
ಯೋಜನೆಯ ಪ್ರಕಾರ ಇಬ್ಬರು ಪೊಲೀಸ್ ಸಿಬ್ಬಂದಿ ಬಂದು ಪರಿಚಯ ಕೇಳಿ ಈತನಿಗೆ ಸಲ್ಯೂಟ್ ಹೊಡೆದಿದ್ದಾರೆ.
ಈ ವೇಳೆ ತಡಬಡಾಯಿಸಿದ ಆತ ನಾಟಕವಾಡಿದ್ದಾನೆ.
ಕೂಡಲೆ ಆತನನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆತ ದೆಹಲಿ ಪೊಲೀಸ್‍ ಸಂವಹನ ಘಟಕದಿಂದ ಇತ್ತೀಚೆಗೆ ನಿವೃತ್ತನಾಗಿದ್ದ ಹೆಡ್‍ ಕಾನ್ಸ್ ಟೇಬಲ್  ಎಂದು ಗೊತ್ತಾಗಿದೆ.
ಜನರನ್ನು ಸುಲಿಗೆ ಮಾಡುವ ಉದ್ದೇಶದಿಂದ ಗುರುತಿನ ಚೀಟಿಯನ್ನು ಈತ ನಕಲಿ ಮಾಡಿದ್ದಾನೆ. ಆದರೆ ತನ್ನ ಮೊದಲ ಪ್ರಯತ್ನದಲ್ಲೇ ಸಿಕ್ಕಿಬಿದ್ದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.