ಮೈಸೂರು: ಬೆಂಗಳೂರಿನ ಗಾಂಜಾ ಚಾಳಿ ಮೈಸೂರಿಗೂ ತಟ್ಟಿದಂತಿದೆ.
ರಿಂಗ್ ರಸ್ತೆಯಲ್ಲಿರುವ ಪ್ರತಿಷ್ಠಿತ ಕಾಲೇಜೊಂದರ ಮುಂದೆ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ಅಬಕಾರಿ ಇಲಾಖೆಯ ಸಬ್ ಇನ್ಸಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವೇಳೆ ಯುವಕರು ಗಾಂಜಾ ಮಾರುತ್ತಿರುವುದು ಕಂಡು ಬಂದಿದೆ.
ರೆಡ್ ಹ್ಯಾಂಡಾಗಿ ಯುವಕರಿಬ್ಬರನ್ನು ಬಂಧಿಸಿ ಅವರ ಬಳಿ ಇದ್ದ 600 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದು ಯುವಕರಿಬ್ಬರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಸಬ್ ಇನ್ಸಪೆಕ್ಟರ್ ರವಿಕುಮಾರ್ ಪ್ರತಿಕ್ರಿಯಿಸಿ ಮೈಸೂರು ಹೊರವಲಯ ಅಷ್ಟೇ ಅಲ್ಲ, ನಗರದೊಳಗಡೆ ಕೂಡ ಪ್ರತಿಷ್ಠಿತ ಕಾಲೇಜುಗಳ ಎದುರು ಗಾಂಜಾ ಮಾರುತ್ತಾರೆಂಬ ಮಾಹಿತಿ ಇದೆ ಎಂದು ಹೇಳಿದರು.
ಅಂತಹ ಪ್ರಕರಣಗಳೇನಾದರೂ ಕಂಡರೆ ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಅವರು ಮನವಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನತೆ ಮಾದಕ ವ್ಯಸನಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಕೆಡುವುದಲ್ಲದೇ, ಅಪರಾಧ ಕೃತ್ಯಗಳು ಹೆಚ್ಚುತ್ತವೆ ಎಂದು ಹೇಳಿದರು.
ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗದಂತೆ ಜಾಗೃತಿ ವಹಿಸಬೇಕು. ಸಾರ್ವಜನಿಕರು ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸರ ಗಮನಕ್ಕೆ ತರಬೇಕು ಎಂದು ರವಿಕುಮಾರ್ ವಿನಂತಿಸಿದರು.