ಉಡುಪಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 25 ಹಿಂದೂ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಮುಖಂಡರ ಮನವೊಲಿಸಬೇಕೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಲ್ಲಿ ಮನವಿ ಮಾಡಿದ್ದಾರೆ.
ಶ್ರೀಮಠಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ನಂತರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ರಾಜ್ಯ ಚುನಾವಣೆಯಲ್ಲಿ 25 ಸ್ಥಾನಗಳನ್ನು ಹಿಂದೂಪರ ಹೋರಾಟಗಾರರು ಸಂಘಟಕರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಹಿಂದೂ ಕಾರ್ಯಕರ್ತರು ಶಾಸಕರಾಗಿ ಆಯ್ಕೆಯಾದರೆ ಹಿಂದುತ್ವದ ಬಗ್ಗೆ ಧ್ವನಿ ಎತ್ತುತ್ತಾರೆ. ಹಿಂದುತ್ವಕ್ಕೆ ಅವಕಾಶ ನೀಡುತ್ತಾರೆ ಎಂದು ಅಭಿಪ್ರಾಯ ಪಟ್ಟರು.
ಬಿಜೆಪಿಯಲ್ಲಿ ಹಿಂದುತ್ವದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಈ ಕೊರತೆ ನೀಗಿಸಲು ನಾವು ಹಿಂದೂ ಕಾರ್ಯಕರ್ತರನ್ನು ಸಜ್ಜಾಗಿಸಬೇಕಾಗಿದೆ ಎಂದು ತಿಳಿಸಿದರು.
ಇದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂಬ ಹಕ್ಕೊತ್ತಾಯ ಮಂಡಿಸುತ್ತೇನೆ. ಬಿಜೆಪಿಗಾಗಿ ನಾವು ರಕ್ತ, ಬೆವರು ಸುರಿಸುತ್ತೇವೆ. ಟಿಕೆಟ್ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.
ಬಿಜೆಪಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ಈ ಬಗ್ಗೆ ಪೇಜಾವರ ಶ್ರೀಗಳ ಗಮನ ಸೆಳೆದಿದ್ದೇನೆ. ಸಂಬಂಧಪಟ್ಟವರ ಜತೆ ಮಾತನಾಡುವುದಾಗಿ ಶ್ರೀಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಟಿಕೆಟ್ ಕೊಟ್ಟೇ ಕೊಡುತ್ತಾರೆಂಬ ವಿಶ್ವಾಸವಿದೆ ಕ್ಷೇತ್ರ ಇಂತದ್ದೆಂದು ನಾವು ಹೇಳುವುದಿಲ್ಲ. ಸಮರ್ಥರಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಡುವ ಸಾಮರ್ಥ್ಯ ನಮ್ಮ ಕಾರ್ಯಕರ್ತರಿಗಿದೆ ಎಂದು ಹೇಳಿದರು.
ಹಿಂದೂ ಕಾರ್ಯಕರ್ತರ ಮೇಲೆ ಹಾಕಿರುವ ರೌಡಿಶೀಟರ್ ಕೇಸ್‍ಗಳು, ಗೂಂಡಾಕಾಯ್ದೆ ತೆರವು ಮಾಡಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಇದನ್ನು ಕೂಡ ಶ್ರೀಗಳ ಗಮನಕ್ಕೆ ತಂದಿದ್ದೇನೆ ಎಂದು ಮುತಾಲಿಕ್ ಹೇಳಿದರು.
ಶಿವಮೊಗ್ಗ ಶಂಕಿತ ಉಗ್ರನ ಬಂಧನದ ವಿಚಾರವಾಗಿ ಮಾತನಾಡಿದ ಅವರು, ಯಾಸಿನ್ ಭಟ್ಕಳ್ ಶಿವಮೊಗ್ಗಕ್ಕೆ ಬಂದು ಹೋದ ಬಗ್ಗೆ ಆರು ವರ್ಷದ ಹಿಂದೆಯೇ ನಾನು ದಾಖಲೆ ಕೊಟ್ಟಿದ್ದೆ.
ಆಗ ನಿರ್ಲಕ್ಷ್ಯ ಮಾಡಲಾಗಿತ್ತು. ಈಗ ಮತ್ತೊಮ್ಮೆ ದಾಖಲೆ ಸಹಿತ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದು ಹೇಳಿದರು.