ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ವಿದೂಷಕ, ಅವರಿಗಿನ್ನೂ ಮೆಚ್ಯೂರಿಟಿ ಆಗಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಆರ್ಕಾವತಿ ವಿಚಾರದಲ್ಲಿ ಲೋಕಾಯುಕ್ತ ಬಂದ್ ಮಾಡದಿದ್ದರೇ ಸಿದ್ದರಾಮಯ್ಯ ಜೈಲಿಗೆ ಹೋಗ್ತಿದ್ರು ಎಂಬ ಕಟೀಲ್ ಹೇಳಿಕೆಗೆ ಸಿದ್ದರಾಮಯ್ಯ ಕಟುವಾಗಿ ಪ್ರತಿಕ್ರಿಯಿಸಿದರು.
ನಮ್ಮ ಸರ್ಕಾರ ಹೋಗಿ ಎಷ್ಟು ದಿನ ಆಯ್ತು ಈಗ ಯಾವ ಸರ್ಕಾರ ಇದೆ ಮೂರು ವರ್ಷದಿಂದ ಯಾರು ಅಧಿಕಾರದಲ್ಲಿದ್ದಾರೆ ನಾವು ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದವರು ಯಾರು ಎಂಬ ಅರಿವು ಕೂಡಾ ಕಟೀಲ್ ಇಲ್ಲದಂತೆ ಕಾಣುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಯಾಕೆ ಇವೆಲ್ಲಾ ರೈಜ್ ಮಾಡಲಿಲ್ಲ ಆಗ ಬಾಯಿಗೇನು ಕಡುಬು ಸಿಕ್ಕಿಸಿಕೊಂಡಿದ್ರಾ ಎಂದು ಕಿಡಿಕಾರಿದರು.
ನಾವು ಭ್ರಷ್ಟಾಚಾರ ಆರೋಪ ಮಾಡೋಕೆ ಶುರು ಮಾಡಿದ ಮೇಲೆ ಹೀಗೆ ಮಾತಾಡ್ತಾ ಇದಾರೆ.2006 ರಿಂದ ಇವತ್ತಿನವರೆಗೆ ಯಡಿಯೂರಪ್ಪ, ಕುಮಾರಸ್ವಾಮಿ ಆಡಳಿತ ಇತ್ತು. ಈವಾಗ ಬಿಜೆಪಿ ಅಧಿಕಾರ ಮಾಡ್ತಾ ಇದೆ.
ನಾವು 5 ವರ್ಷ ಆಡಳಿತದಲ್ಲಿದ್ದೆವು. 2006 ರಿಂದ ಎಲ್ಲವನ್ನೂ ತನಿಖೆ ಮಾಡಿಸಲಿ ನಾನು ಇದನ್ನು ಪದೇ ಪದೇ ಹೇಳುತ್ತಿದ್ದೇನೆ ಎಂದರು.
ಅಧಿಕಾರದಲ್ಲಿ ನೀವೆ ಇರುವಾಗ ನಿಮಗೇಕೆ ಭಯ ಎಂದು ಪ್ರಶ್ನಿಸಿದ್ದಾರೆ.
40 ಪರ್ಸೆಂಟ್ ಸರ್ಕಾರ ಅಂತ ಸುಮ್ಮನೆ ಆರೋಪ ಮಾಡ್ತಾ ಇಲ್ಲ. ನರೇಂದ್ರ ಮೋದಿ ಬಂದು ನನಗೆ 10 ಪರ್ಸೆಂಟ್ ಸರ್ಕಾರ ಅಂದ್ರಲ್ಲ. ಆಗ ಯಾವ ದಾಖಲಾತಿ ಕೊಟ್ಟಿದ್ದರು.
2018ರಲ್ಲಿ ನನ್ನ ವಿರುದ್ಧ ಆರೋಪ ಮಾಡಿದಾಗ ಯಾವ ದಾಖಲಾತಿ ಕೊಟ್ಟಿದ್ದರು, ಆವಾಗ ಕಟೀಲು ಎಲ್ಲಿದ್ದರು ಎಂದು ಸಿದ್ದು ಖಾರವಾಗಿ ಪ್ರಶ್ನಿಸಿದರು.
ಯಡಿಯೂರಪ್ಪ ಕೂಡಾ ಅಧ್ಯಕ್ಷರಾಗಿದ್ದರು ನರೇಂದ್ರ ಮೋದಿ ಕಡೆಯಿಂದ ಅವರೇ ಹೇಳಿಸಿದ್ದು ಅಲ್ವಾ ಎಂದು ಪ್ರಶ್ನೆಗಳ ಸುರಿಮಳೆಗೈದರು.
40 ಪರ್ಸೆಂಟ್ ಕಮೀಷನ್ ಸರ್ಕಾರ ಎಂಬ ಆರೋಪಕ್ಕೆ, ವಿರುದ್ಧವಾಗಿ ಬಿಜೆಪಿ ನಾಯಕರು ಜಾತಿ ಅಸ್ತ್ರ ಎಳೆತಂದಿದ್ದಾರೆ. ಜಾತಿಗೂ ಭ್ರಷ್ಟಾಚಾರಕ್ಕೂ ಸಂಬಂಧವೇನು.
ಬಸವರಾಜ ಬೊಮ್ಮಾಯಿ ಇಸ್ ದಿ ಹೆಡ್ ಆಫ್ ದಿ ಗವರ್ನಮೆಂಟ್. ಹಾಗಾಗಿ ಅವರ ಮೇಲೆ ಆರೋಪ ಮಾಡ್ತಿದ್ದೇವೆಯೇ ಹೊರತು ಜಾತಿಯ ಮೇಲಲ್ಲ.
ಈ ರೀತಿ ಕ್ಷುಲ್ಲಕ ವಿಚಾರಗಳಿಂದ ದಾರಿ ತಪ್ಪಿಸುವ ಕೆಲಸ ಮಾಡಿದ್ರೆ ನಂಬೋದಕ್ಕೆ ಜನ ತಯಾರಿರಲ್ಲ. ಏಕೆಂದರೆ ಜನ ಈಗ ಬುದ್ಧಿವಂತರಾಗಿದ್ದಾರೆ ಎಂದು ತಿಳಿಸಿದರು.
ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್ ಲೆಸ್ ಸ್ಟ್ರಾಂಗ್ ಲೆಸ್ ಎನಿಮಿಸ್, ನೋ ಸ್ಟ್ರಾಂಗ್ ನೋ ಎನಿಮಿಸ್ ಅಂತಾ ಅಸೆಂಬ್ಲಿಯಲ್ಲಿ ಹೇಳಿದ್ದೆ. ಅದಕ್ಕೆ ಅವರು ನನ್ಮೇಲೆ ಟಾರ್ಗೆಟ್ ಮಾಡೋದು ಸಿದ್ದರಾಮಯ್ಯ ತಿರುಗೇಟು ನೀಡಿದರು.