10 ಮಂದಿ ಕತರ್ನಾಕ್ ಕಳ್ಳರ ಬಂಧನ: 50ಲಕ್ಷ ಬೆಲೆಯ ಮಾಲು ಮಾಲಿಕರಿಗೆ ಹಸ್ತಾಂತರ

ಮೈಸೂರು: ಸಿಸಿಬಿ ಪೊಲೀಸರು ಕುಖ್ಯಾತ ಹತ್ತು ಮಂದಿ ಸರಗಳ್ಳರನ್ನು ಬಂಧಿಸಿ ವಶಪಡಿಸಿಕೊಂಡ 50,00,000ರೂ.ಮೌಲ್ಯದ ಕೆ.ಜಿ. ತೂಕದ ಚಿನ್ನದ ಸರಗಳಲ್ಲಿ ಕೆಲವನ್ನು ವಾರಸುದಾರರಿಗೆ ಹಿಂತಿರುಗಿಸಲಾಯಿತು.
ಒಟ್ಟಾರೆ 25ಚಿನ್ನದ ಸರಗಳು  ಮತ್ತು ಇತರೇ ಚಿನ್ನಾಭರಣಗಳನ್ನು ಸಿಸಿಬಿ ಪೊಲೀಸರು ವಶಪಡಿಕೊಂಡಿದ್ದಾರೆ ಎಂದು ನಗರ ಪೊಲೀಸ್  ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಸಿಸಿಬಿ ಘಟಕ ಅಧಿಕಾರಿಗಳು, ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ತಿಳಿಸಿದರು. 
ಈ ತಂಡವು ಸೆಪ್ಟೆಂಬರ್ ಮಾಹೆಯಲ್ಲಿ ಕಾರ್ಯಾಚರಣೆ ಕೈಗೊಂಡು ಎರಡು ಕುಖ್ಯಾತ ಸರಗಳ್ಳರ ತಂಡ ಹಾಗೂ  ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರು   ಸೇರಿದಂತೆ ಒಟ್ಟು ಹತ್ತು ಮಂದಿ ಸರಗಳ್ಳರನ್ನು ವಶಕ್ಕೆ ಪಡೆಯಿತು.
ಮೈಸೂರು ನಗರ, ಮೈಸೂರು ಜಿಲ್ಲೆ, ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ವರದಿಯಾಗಿರುವ ಒಟ್ಟು 25ಸರಗಳ್ಳತನ ಪ್ರಕರಣಗಳು, ಒಂದು ಮನೆಗಳ್ಳತನ ಮತ್ತು ಎರಡು ದ್ವಿಚಕ್ರವಾಹನ ಕಳ್ಳತನ ಪತ್ತೆಯಾಗಿದೆ.
ಪ್ರಕರಣಗಳಿಗೆ ಸಂಬಂಧಪಟ್ಟಂತೆ 50,00,000ರೂ.ಮೌಲ್ಯದ ಒಂದು ಕೆ.ಜಿ.ತೂಕದ 25ಚಿನ್ನದ ಸರಗಳು, ಇತರೆ ಚಿನ್ನಾಭರಣ ಕಳುವು ಪ್ರಕರಣಕ್ಕೆ ಸೇರಿದ 2ದ್ವಿಚಕ್ರವಾಹನ, ಕೃತ್ಯಕ್ಕೆ ಬಳಸಿದ್ದ  ಒಟ್ಟು 7ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಆರೋಪಿಗಳ ಬಂಧನದಿಂದ ಮೈಸೂರು ನಗರ ನಜರ್ ಬಾದ್ ಪೊಲೀಸ್ ಠಾಣೆಯ 2,  ಕುವೆಂಪುನಗರಠಾಣೆಯ 4, ವಿವಿಪುರಂ ಠಾಣೆಯ 2, ನರಸಿಂಹರಾಜ ಠಾಣೆಯ 1, ಸರಸ್ವತಿಪುರಂ ಠಾಣೆಯ 4, ಅಶೋಕಪುರಂ  ಠಾಣೆಯ1, ಕೃಷ್ಣರಾಜ ಠಾಣೆಯ1, ಆಲನಹಳ್ಳಿ ಠಾಣೆಯ 2, ವಿಜಯನಗರ ಠಾಣೆಯ 3,ಲಕ್ಷ್ಮಿಪುರಂ ಠಾಣೆಯ1, ಹೆಬ್ಬಾಳ ಠಾಣೆಯ 2 ಪ್ರಕರಣ, ಮೈಸೂರು ಜಿಲ್ಲೆಯ ಕೌಲಂದೆ ಠಾಣೆಯ 1, ಚಾಮರಾಜನಗರ ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣೆಯ 1 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಮೈಸೂರು ಜಿಲ್ಲೆಯ ಕೌಲಂದೆ ಪೊಲೀಸ್ ಠಾಣೆಯ 1, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ 1 ದ್ವಿಚಕ್ರವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.
ಇದಲ್ಲದೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಬಂದಿದ್ದ ಓರ್ವ ಹಳೆಯ ಎಂಒಬಿ ಅಸಾಮಿಯನ್ನು ದಸ್ತಗಿರಿ ಮಾಡಿ ಆತನಿಂದ ಮನೆಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ 70ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 
ಈ ಸಂಬಂಧ ನರಸಿಂಹ ರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.
ಸರಗಳ್ಳತನ ಪ್ರಕರಣದಲ್ಲಿ ದಸ್ತಗಿರಿ ಮಾಡಿರುವ ಒಂದು ಗುಂಪಿನ ಇಬ್ಬರು ಆರೋಪಿಗಳಲ್ಲಿ ಒಂದನೇ ಆರೋಪಿಯು ಈ ಹಿಂದೆ 27ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
2ನೇ ಆರೋಪಿಯು 4ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈ ಇಬ್ಬರು ಆರೋಪಿಗಳು ವೃತ್ತಿ ನಿರತ ಸರಗಳ್ಳರಾಗಿದ್ದು ಜೈಲು ವಾಸವನ್ನು ಅನುಭವಿಸಿ ಬಂದಿದ್ದಾರೆ.
ನಂತರವೂ ಸಹ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಹೇಳಿದರು.
ಸರಗಳ್ಳತನ ಪ್ರಕರಣಗಳಲ್ಲಿ ದಸ್ತಗಿರಿ ಮಾಡಿರುವ ಮತ್ತೊಂದು ಗುಂಪಿನ 6ಆರೋಪಿಗಳು ಮೂಲತಃ ಚಾಮರಾಜನಗರ ಜಿಲ್ಲೆಯವರಾಗಿದ್ದು ರಕ್ತಸಂಬಂಧಿಗಳು. 
ಹಲವಾರು ವರ್ಷಗಳಿಂದ ಮೈಸೂರು ನಗರ ಹೆಬ್ಬಾಳ ಮತ್ತು ದೇವಯ್ಯನಹುಂಡಿಯಲ್ಲಿ ವಾಸವಾಗಿದ್ದು ಗಾರೆ ಕೆಲಸ ಮತ್ತು ಸೆಕ್ಯೂರಿಟಿ ಕೆಲಸ ಮಾಡಿಕೊಂಡು ಮೈಸೂರು ನಗರ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದರು.
ಮೈಸೂರು ಡಿಸಿಪಿ ಗೀತ ಎಂ.ಎಸ್. ಸಿಸಿಬಿ ಎಸಿಪಿ ಸಿ.ಕೆ.ಅಶ್ವತ್ಥನಾರಾಯಣ ಮಾರ್ಗದರ್ಶನದಲ್ಲಿ ಹೆಚ್ ಬಿ ವಿಭಾಗದ ಪೊಲೀಸ್ ಇನ್ಸಪೆಕ್ಟರ್ ಜಿ.ಶೇಖರ್, ಎಎಸ್ ಐ ಅಸ್ಗರ್ ಖಾನ್, ಎಂ.ಆರ್.ಗಣೇಶ್
ಸಿಬ್ಬಂದಿಗಳಾದ ಉಮೇಶ್ ಯು,ಸಲೀಂಖಾನ್, ರಾಮಸ್ವಾಮಿ, ಯಾಕೂಬ್ ಷರೀಫ್, ಚಿಕ್ಕಣ್ಣ ಸಿ, ಉಮಾಮಹೇಶ ಎ, ಲಕ್ಷ್ಮಿಕಾಂತ ಪಿ.ಎಸ್, ಆನಂದ, ಪ್ರಕಾಶ, ಶಿವರಾಜು ಸಿ.ಎನ್, ಚಂದ್ರಶೇಖರ, ಗೋವಿಂದ, ಮಧುಸೂದನ ಸಿ.ಎಲ್, ಮೋಹನಾರಾಧ್ಯ, ಮಹೇಶ್ ಕೆ., ನರಸಿಂಹರಾಜು, ನಬೀಪಟೇಲ್, ಪವನ್, ಮಮತ ಜಿ.ಆರ್.,  ರಮ್ಯ ಎಂ.ಎಂ. ಗೌತಮ್, ಶಿವಕುಮಾರ್ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.
ಅವರ ಕಾರ್ಯವನ್ನು ಡಾ.ಚಂದ್ರಗುಪ್ತ ಶ್ಲಾಘಿಸಿದರು.