ಚಾಮರಾಜನಗರ ಗಡಿ ಚೆಕ್ ಪೊಸ್ಟ್ ಮೇಲೆ ಲೋಕಾ ದಾಳಿ: 9779 ರೂ ವಶ

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಚಾಮರಾಜನಗರ ಗಡಿ ಚೆಕ್ ಪೊಸ್ಟ್ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ 9779 ರೂ ಜಪ್ತಿ   ಮಾಡಿದ್ದಾರೆ.

ಲೊಕಾಯುಕ್ತ ನ್ಯಾಯಮೂರ್ತಿ ಟಿ.ಎಸ್. ಪಾಟೀಲ್ ಅವರು  ವಿಜಯಪುರಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಚೆಕ್‌ ಪೋಸ್ಟ್‌ಗಳಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಮೌಖಿಕವಾಗಿ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ  ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡು ಏಕಕಾಲದಲ್ಲಿ ರಾಜ್ಯದ ಒಂಬತ್ತು ಕಡೆ ದಾಳಿ ನಡೆಸಿ ಹೆಚ್ಚುವರಿ ಹಣ ವಶಪಡಿಸಿಕೊಂಡು ಮುಂದಿನ ಕ್ರಮ     ಕೈಗೊಂಡಿದ್ದಾರೆ.  

ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳ ಮುಖಾಂತರ ಗೌಪ್ಯ ತನಿಖೆಯನ್ನು ನಡೆಸಿ ವರದಿಗಳನ್ನು ಪಡೆದುಕೊಳ್ಳಲಾಗಿತ್ತು.

ನಂತರ ಸಾರಿಗೆ ಇಲಾಖೆ ಚೆಕ್ ಪೋಸ್ಟ್‌ಗಳಲ್ಲಿ ಅವ್ಯವಹಾರ ಹಾಗೂ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿರುವ ಅಂಶವನ್ನು ಮನಗಂಡು ಚೆಕ್ ಪೊಸ್ಟ್‌ಗಳ ಮೇಲೆ ಶೋಧನೆ ನಡೆಸಲು ನಿರ್ಧರಿಸಲಾಯಿತು.

ಅದರಂತೆ ರಾಜ್ಯದ ವಿವಿದೆಡೆ ಏಕಕಾಲಕ್ಕೆ ದಾಳಿ ನಡೆಸಿ ಚೆಕ್ ಪೋಸ್ಟ್‌ಗಳಲ್ಲಿ ಅಕ್ರಮ ನಡೆದಿರುವುದನ್ನು ದಾಖಲು ಮಾಡಿಕೊಂಡಿದ್ದಾರೆ.

ಅಲ್ಲದೆ  ಚೆಕ್ ಪೋಸ್ಟ್ ಗಳಲ್ಲಿ ಶೋಧನೆ ಮಾಡಿದ ಸಂದರ್ಭದಲ್ಲಿ ಅಕ್ರಮ ಹಣ  ಪತ್ತೆಯಾಗಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೋಕಿನ ಪಟಣದ ಐಬಿ ಹತ್ತಿರ ಇರುವ ಆರ್ ಟಿ ಒ  ಚೆಕ್ ಪೊಸ್ಟ್ ತಪಾಸಣೆ ಮಾಡಿ    ೯೭೭೯ ರೂ ಅಕ್ರಮ ಹಣ ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಚರಣೆಯಲ್ಲಿ  ಮೈಸೂರು ಲೊಕಾಯುಕ್ತ ಎಸ್ಪಿ ಸುರೇಶ್ ಬಾಬು. ಡಿವೈಸ್ಪಿಗಳಾದ ಸಣ್ಣತಮ್ಮಪ್ಪ ಒಡೆಯಾರ್, ಮಾಲ್ತೇಶ್, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಲೋಕೇಶ್, ರವಿಕುಮಾರ್, ಜಯರತ್ನ, ಪೊಲೀಸ್ ಸಿಬ್ಬಂದಿಗಳಾದ ಲೊಕೇಶ್, ಗೋಪಿ, ರಮೇಶ್, ಮಹಾಲಿಂಗಸ್ವಾಮಿ ಇತರರು ಭಾಗವಹಿಸಿದ್ದರು.

ರಾಜ್ಯದ ವಿವಿದೆಡೆಯಲ್ಲಿ ನಡೆದ ಕಾರ್ಯಚರಣೆಯ ಮೇಲುಸ್ತುವಾರಿಯನ್ನು  ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕರಾದ ಪ್ರಶಾಂತ್ ಕುಮಾರ್ ವಹಿಸಿಕೊಂಡಿದ್ದರು.