ಶ್ರೀರಂಗಪಟ್ಟಣ: ಕೊಡಗಿನ ಕಾವೇರಿ ನದಿ ನಾಡಿನ ಲಕ್ಷಾಂತರ ಜನರ ಜೀವನಾಡಿಯಾಗಿದೆ. ಇತ್ತೀಚಿನ ದಿನಗಳಲ್ಲಿ ನದಿಯ ನೀರು ಕಲುಷಿತಗೊಳ್ಳುತ್ತಿರುವುದು ಬೇಸತದ ಸಂಗತಿಯಾಗಿದೆ.
ಇದಕ್ಕೆ ಕಾರಣ ಪಟ್ಟಣದ ಹಲವು ಕೋಳಿ ಮತ್ತು ಕುರಿ ಮಾಂಸದ ಅಂಗಡಿಗಳ ಮಾಲೀಕರು ಕುರಿ, ಕೋಳಿ ತ್ಯಾಜ್ಯವನ್ನು ಚೀಲಗಳಲ್ಲಿ ತುಂಬಿಸಿ ನದಿಗೆ ಎಸೆಯುತ್ತಿರುವುದು.
ಕೆಲವರು ಮಾಟ ಮಂತ್ರ ಮಾಡಿಸಿದ ತ್ಯಾಜ್ಯವನ್ನು ಸಹಾ ಇದೇ ನದಿಗೆ ಸುರಿಯುತ್ತಿದ್ದಾರೆ.
ಯಾರಿಗಾದರೂ ಯಾವುದೇ ವಸ್ತು ಬೇಡ ಎನಿಸಿದರೆ ತಮ್ಮ ವಾಹನಗಳಲ್ಲಿ ತಂದು ಸೇತುವೆ ಮೇಲೆ ನಿಂತು ಕಾವೇರಿ ನದಿಗೆ ಹಾಕಿ ಹೋಗುತ್ತಾರೆ.
ಕಾವೇರಿ ನದಿಯ ಮಲಿನತೆ ತೊಡೆಯಲು ಮುಂದಾಗಿರುವ ಯುವ ಬ್ರೀಗೆಡ್ ಸದಸ್ಯರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ.
ಇವರಿಗೆ ಶ್ರೀರಂಗಪಟ್ಟಣದ ಸ್ವಯಂಸೇವಕರು ಕೂಡ ಕೈ ಜೋಡಿಸಿದ್ದಾರೆ.
ಜಿಲ್ಲೆಯ ವಿವಿಧೆಡೆಯಿಂದ ಬಂದವರಿಗೆ ವಸತಿ, ಊಟದ ಸೌಕರ್ಯ ಅಗತ್ಯ ಸಲಕರಣೆಗಳನ್ನು ಶ್ರೀರಂಗಪಟ್ಟಣದ ಜನತೆ ಕಲ್ಪಿಸಿದೆ.
ಇಂತಹ ಸಮಾಜಮುಖಿ ಕಾರ್ಯಗಳನ್ನು ಯಾರು, ಎಲ್ಲಿ ಮಾಡಿದರೂ ಶ್ರೀರಂಗಪಟ್ಟಣದ ಸ್ವಯಂಸೇವಕರು ಕೈ ಜೋಡಿಸಲಿದ್ದೇವೆ ಎಂದು ರಾಷ್ಟ್ರೀಯ ಸ್ವಯಂಸೇವಕರು ಮತ್ತು ಸ್ವಯಂ ಪ್ರೇರಿತವಾಗಿ ಬಂದ ಸ್ವಯಂಸೇವಕರು ಹೇಳಿದ್ದಾರೆ.
ಒಟ್ಟಿನಲ್ಲಿ ಕಸದಿಂದ ತುಂಬಿದ್ದ ಕಾವೇರಿ ನದಿ ಈಗಲಾದರೂ ಸ್ವಚ್ಛವಾಗುತ್ತಿದೆ ಎಂಬುದೇ ಸಮಾಧಾನಕರ ಸಂಗತಿ.
ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಯುವಬ್ರಿಗೇಡ್ ಸ್ವಯಂ ಸೇವಕರು ನದಿ ಸ್ವಚ್ಛ ಮಾಡುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ.
ಇನ್ನು ಮುಂದಾದರೂ ತೀರ್ಥ ಕ್ಷೇತ್ರಗಳಿಗೆ ತೆರಳುವ ಜನರು ಸ್ವಚ್ಛತೆ ಕಾಪಾಡಿ ನದಿಯ ನೀರು ಸಧ್ಬಳಕೆಯಾಗುವಂತೆ ನೋಡಿಕೊಳ್ಳಬೇಕಿದೆ.