ಮೈಸೂರು: ಶ್ರೀ ಸುತ್ತೂರು ಜಗದ್ಗುರು ರಾಜಗುರುತಿಲಕ ಡಾ.ಶಿವರಾತ್ರೀ ರಾಜೇಂದ್ರ ಮಹಾಸ್ವಾಮಿಗಳ 105ನೇ ಜಯಂತಿ ಆ. 29ರಂದು ನಡೆಯಲಿದೆ ಎಂದು ಜಯಂತಿ ಸಮಿತಿ ಸಂಚಾಲಕ ಹಾಗೂ ಜೆಎಸ್ ಎಸ್ ವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ ತಿಳಿಸಿದರು.
ಮೈಸೂರು- ಊಟಿ ರಸ್ತೆಯಲ್ಲಿರುವ ಜೆಎಸ್ ಎಸ್ ಕಾಲೇಜಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದÀರು.
ಕೋವಿಡ್-19 ಪಿಡುಗಿನಿಂದ ಆ.29ರಂದು ಸಮಾರಂಭವನ್ನು ಡಿಜಿಟಲ್ ಮಾಧ್ಯಮದಲ್ಲಿ ನೆರವೇರಿಸಲಾಗುತ್ತದೆ ಎಂದರು. ಅಂದು ಬೆಳಿಗ್ಗೆ 9ಕ್ಕೆ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶ್ರೀಶಿವಯೋಗಿಗಳವರ ಕರ್ತೃ ಗದ್ದುಗೆ, ರಾಜೇಂದ್ರ ಶ್ರೀಗಳ ಗದ್ದುಗೆಯಲ್ಲಿ ಪೂಜೆ ನೆರವೇರಲಿದೆ. ನಂತರ 10.30ಕ್ಕೆ ಕಾರ್ಯಕ್ರಮವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುತ್ತೂರು ಶ್ರೀಮಠ-ಗುರುಪರಂಪರೆ ಮತ್ತು ದಿ ಹೆರಿಟೇಜ್ ಆಫ್ ಶ್ರೀ ಸುತ್ತೂರು ಮಠ್ ಆನಿಮೇಷನ್ ಚಿತ್ರಗಳನ್ನು ಬಿಡುಗಡೆ ಮಾಡಲಿದ್ದಾರೆಂದು ಅವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಯಕ ತಪಸ್ವಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಾರು ತೆಲುಗು ಅನುವಾದಿತ ಕೃತಿ, ಭಕ್ತಿ ಭಂಡಾರಿ ಬಸವೇಶ್ವರರಿನ್ ವಸನಂಗಳ್ ತಮಿಳು ಅನುವಾದಿತ ಪುನರ್ ಮುದ್ರಿತ ಕೃತಿ ಮತ್ತು ನೀತಿ ;ಸಾಮ್ರಾಜ್ಯ ಶತಕ ಸಂಪಾದಿತ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆಂದರು.
ಡಿಸಿಎಂ ಡಾ.ಎನ್.ಆಶ್ವತ್ಥ ನಾರಾಯಣ್ ಪ್ರಸಾದ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದು, ಸಹಕಾರ ಸಚಿವ ಎಸ್.ಟಿ.ಸೋಮಶೇಕರ್ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಮತ್ತು ಬಹುಮಾನಗಳನ್ನು ಸಾಂಕೇತಿಕವಾಗಿ ವಿಭಾಗಗಳ ಮುಖ್ಯಸ್ಥರಿಗೆ ವಿತರಣೆ ಮಾಡಲಿದ್ದಾರೆ. ಕರ್ನಾಟಕ ವಿವಿ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಗುರುನಮನ ಸಲ್ಲಿಸಿ ಬಿಡುಗಡೆಯಾಗುವ ಮೂರು ಕೃತಿಗಳ ಪರಿಚಯ ಮಾಡಿಕೊಡಲಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.
ಮಧ್ಯಾಹ್ನ 12.30ಕ್ಕೆ ಜಗದ್ಗುರು ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಬದುಕನ್ನು ಆಧರಿಸಿ ರಚಿಸಲಾಗಿರುವ ದಿವ್ಯ ಚೇತನ ನಾಟಕ ಮತ್ತು ಕಾಯಕ ತಪಸ್ವಿ ನೃತ್ಯ ರೂಪಕ ವಿಡಿಯೋಗಳ ನೇರ ಪ್ರಸಾರವಿರುತ್ತದೆ. ಸಂಜೆ 4ಕ್ಕೆ ಕೋವಿಡ್-19 ಸವಾಲು ಹಾಗೂ ಸ್ಥೈರ್ಯದ ನಿರ್ವಹಣೆ ಸಂವಾದ ಕಾರ್ಯಕ್ರಮವನ್ನು ಜಮ್ಮು ಕಾಶ್ಮೀರದ ಲೆಪ್ಟಿನೆಂಟ್ ಗವರ್ನರ್ ಡಾ.ಮನೋಜ್ ಸಿನ್ಹಾ ಉದ್ಘಾಟಿಸಲಿದ್ದು, ಸಂವಾದಕರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಚಿವ ಸುಧಾಕರ್, ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ, ಚಲನಚಿತ್ರ ಕಲಾವಿದ ದರ್ಶನ್ ತೂಗುದೀಪ ಭಾಗವಹಿಸಲಿದ್ದಾರೆ. ಜೆಎಸ್ ಎಸ್ ಎ ಹೆಚ್ ಇಆರ್ ನ ಸಮಕುಲಾಧಿಪತಿ ಹಾಗೂ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಡಾ. ಬಿ. ಸುರೇಶ್ ಸಮನ್ವಯಕಾರರಾಗಿರುತ್ತಾರೆ. ಸಂಜೆ 6ಕ್ಕೆ ಸುತ್ತೂರು ಶ್ರೀಮಠ ಗುರುಪರಂಪರೆ ಮತ್ತು 7ಕ್ಕೆ ದಿ ಹೆರಿಟೇಜ್ ಆಫ್ ಶ್ರೀ ಸುತ್ತೂರು ಮಠ್ ಅನಿಮೇಷನ್ ಚಿತ್ರಗಳ ನೇರಪ್ರಸಾರವಿರಲಿದೆ. ಪ್ರತಿಯೊಂದರ ಪ್ರಸಾರ ಮುಗಿದ ಕೂಡಲೆ ರಸಪ್ರಶ್ನೆ ಇರಲಿದೆ. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರಿಯಾದ ಉತ್ತರ ನೀಡುವ ಮೊದಲ 5 ಮಂದಿಗೆ ಪ್ರಶಂಸನಾ ಪತ್ರದ ಜೊತೆಗೆ ಕ್ರಮವಾಗಿ 5000, 4000, 3000 ,2000, 1000 ನಗದು ಬಹುಮಾನವನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಹೆಚ್ಚಿನ ವಿವರಗಳ ಅಗತ್ಯವಿದ್ದಲ್ಲಿ 93418 16701ನ್ನು ಸಂಪರ್ಕಿಸಬಹುದು ಎಂದರು.
ಜೆಎಸ್ ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸಿ.ಜಿ.ಬೆಠಸೂರ್ ಮಠ್, ಮಲ್ಲಿಕಾರ್ಜುನ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.