(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ವೀಲಿಂಗ್ ಮಾಡೋದರಿಂದ ಏನೇನು ಅನಾಹುತ ಆಗುವುದು ಎಂಬುದರ ಅರಿವಿದ್ದರೂ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಲೇ ಇದೆ.
ಅದೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆಯೇ ವ್ಹೀಲಿಂಗ್ ಪಡ್ಡೆ ಹುಡುಗರು ವ್ಹೀಲಿಂಗ್ ಮಾಡುತ್ತಿದ್ದರೂ ಯಾವುದೇ ಪೊಲೀಸರು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ವ್ಹೀಲಿಂಗ್ ವಿಚಾರವಾಗಿ ಇತ್ತೀಚೆಗೆ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿತ್ತು.
ಹಾಗಾಗಿ ಜಾಗೃತಿ ಮೂಡಿಸಲು ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ತಿಂಗಳ ಹಿಂದೆ ಪಥಸಂಚಲನ ನಡೆಸಿದ್ದರು.
ಇದು ಎಲ್ಲರಿಗೂ ತಿಳಿದೆ ಇದೆ..ಆದರೆ ಎಸ್ಪಿ ಕಚೇರಿ ಮುಂದೆಯೆ ಎಗ್ಗಿಲ್ಲದೆ ವ್ಹೀಲಿಂಗ್ ಮಾಡುತ್ತಿದ್ದಾರೆ. ಇವರ ಅಟ್ಟಹಾಸಕ್ಕೆ ತಡೆ ಹಾಕುವವರೇ ಇಲ್ಲದಂತಾಗಿದೆ.ಜಿಲ್ಲಾ ಪೊಲೀಸರು ನಿದ್ದೆಗೆ ಜಾರಿದ್ದಾರೆ ಎಂದು ಜನ ದೂರುತ್ತಿದ್ದಾರೆ.
ಚಾಮರಾಜನಗರದ ಸಂತೇಮರಹಳ್ಳಿ ವೃತ್ತದ ಬಳಿ ಕಳೆದ ತಿಂಗಳು ರಾತ್ರಿ ಸುಮಾರು 9 ಗಂಟೆಯಲ್ಲು 15 ವರ್ಷದ ಅನ್ಯಕೋಮಿನ ಹುಡುಗನೊಬ್ಬ ಸೈಕಲ್ ವೀಲಿಂಗ್ ಮಾಡುತ್ತಿದ್ದ.
ಆಗ ಸೈಕಲ್ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಇನ್ನೊಂದು ಸಮುದಾಯದ ಯುವಕನಿಗೆ ತಾಗಿದೆ.
ಇದನ್ನು ಪ್ರಶ್ನಿಸಿದ ಯುವಕ ಹುಡುಗನನ್ನು ಗದರಿಸಿ ಕೈಯಲ್ಲಿ ಹೊಡೆದು ಕಳಿಸಿದ್ದ.
ಈ ವಿಚಾರವನ್ನು ಹುಡುಗ ತನ್ನಸಮುದಾಯವರಿಗೆ ಹೇಳಿದಾಗ ಅವರು ಗುಂಪು ಕಟ್ಟಿಕೊಂಡು ಬಂದರು.
ಈ ವೇಳೆ ಜಗಳವಾಗಿ ಘರ್ಷಣೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗುಂಪನ್ನು ಚದುರಿಸಿ,ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು.
ನಗರದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದರಿಂದ ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಜತೆಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ವಿವಿದ ಠಾಣೆಯ ಪೊಲೀಸ್ ಸಿಬ್ಬಂದಿಗಳು ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದ್ದರು.
ಇಷ್ಟೆಲ್ಲಾ ಆದರೂ ಪಟ್ಟಣದಲ್ಲಿ ದಿನೇ ದಿನೆ ಬೈಕಲ್ ವ್ಹೀಲಿಂಗ್ ಹೆಚ್ಚುತ್ತಲೇ ಇದೆ.
ಯಾರದೇ ಅಂಜಿಕೆ ಇಲ್ಲದೆ ವ್ಹೀಲಿಂಗ್ ಮಾಡುತ್ತಿದ್ದರೂ ಪೊಲೀಸರು ಮಾತ್ರ ತಮಗೂ ಇದಕ್ಕೂ ಸಂಬಂದವೇ ಇಲ್ಲ ಎಂಬಂತೆ ಇದ್ದಾರೆ.
ಪೊಲೀಸರ ನಿಷ್ಕ್ರಿಯತೆ ಕೂಡ ಇಂತಹ ಅವಕಾಶಗಳಿಗೆ ಕಾರಣ ಎಂದರೆ ತಪ್ಪಾಗಲಾರದು.
ಈ ಸಂಬಂಧ ಮಾದ್ಯಮದವರೊಂದಿಗೆ ಎಸ್ಪಿ ಶಿವಕುಮಾರ್ ಅಂದು ಮಾತನಾಡಿ, ಕೇವಲ ಸೈಕಲ್ ವ್ಹೀಲಿಂಗ್ ನಿಂದ ಇಂತಹ ಘಟನೆ ಆಗಿದೆ.
ಈಗಾಗಲೇ ಇನ್ಸ್ ಪೆಕ್ಟರ್ ಗಳ ಜೊತೆಗೂಡಿ ತಂಡ ರಚಿಸಲಾಗಿದೆ. ತಂಡದ ಸಂಖ್ಯೆ ಹೆಚ್ಚಿಸಿ ಜಿಲ್ಲೆಯ ಎಲ್ಲಾ ಇನ್ಸ್ ಪೆಕ್ಟರ್ ನೇತೃತ್ವದ ತಂಡ ರಚಿಸಿ ವ್ಹೀಲಿಂಗ್ ಅಬಿಯಾನ ಮಾಡಿ ಸಂಪೂರ್ಣ ತಡೆಗೆ ಕ್ರಮ ವಹಿಸಲಾಗುವುದು
ಎಂದು ಭರವಸೆ ನೀಡಿದ್ದರು.
ಒಂದು ವಾಹನವೂ ಇಂತ ಅಪಾಯಕಾರಿ ವಾಹನ ಚಾಲನೆ ಮಾಡದಂತೆ ತಡೆಗಟ್ಟುತ್ತೇವೆ ಎಂದು ತಿಳಿಸಿದ್ದರು.
ಒಂದು ತಿಂಗಳಿಂದ ಚಾಮರಾಜನಗರ ಜೋಡಿರಸ್ತೆಯಲ್ಲಿ ಪ್ರತಿರಾತ್ರಿ ವ್ಹೀಲಿಂಗ್ ನಡೆಯುತ್ತಿದ್ದರೂ ಅವರನ್ನು ಪತ್ತೆ ಮಾಡಿ ಕ್ರಮ ವಹಿಸಲು ಪೊಲೀಸ್ ಇಲಾಖೆ ವಿಫಲವಾಗಿದೆ.
ಏನಾದರೂ ಸಿಕ್ಕರೆ ಸಾಕು ದಂಡ ಹಾಕಲು ಸಂಚಾರಿ ಠಾಣೆಯ ಸಿಬ್ಬಂದಿ ಗುಂಪು ಗುಂಪಾಗಿ ಕಾಯುತ್ತಿರುತ್ತಾರೆ.
ಒಂದು ಸಣ್ಣ ತಪ್ಪು ಕಂಡರೂ ಬಂದು ಹಿಡಿದು ದಂಡ ಹಾಕುತ್ತಾರೆ.ಆದರೆ ಅಪಾಯಕಾರಿ ವ್ಹೀಲಿಂಗ್ ನಂತಹ ಕೃತ್ಯದಲ್ಲಿ ತೊಡಗುವವರ ಮೇಲೆ ಕ್ರಮ ಜರುಗಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಿಲ್ಲೆಯ ಇನ್ಸ್ ಪೆಕ್ಟರ್ ಗಳೊಳಗೊಂಡ ರಚಿಸಿತ್ತೇವೆ ಎಂದಿದ್ದ ಎಸ್ಪಿ ಶಿವಕುಮಾರ್ ಅವರಿಗೆ ತಮ್ಮದೆ ಇಲಾಖೆಯ ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗುವ ಇಂತ ದೃಶ್ಯಗಳು ಕಣ್ಣಿಗೆ ಕಾಣದೆ ಇರೋದು ವಿಪರ್ಯಾಸ.
ವ್ಹೀಲಿಂಗ್ ಸಂಬಂದ ಸ್ಥಳೀಯರು ಎಸ್ಪಿ ಅವರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ.
ಇತ್ತ ಕೆಲ ಮಾದ್ಯಮದವರು ಐಜಿಪಿ ಮದುಕರ್ ಪವಾರ್ ಅವರಿಗೆ ತಿಳಿಸಿದರೂ ಉಪಯೋಗುತ್ತಿಲ್ಲ.
ವ್ಹೀಲಿಂಗ್ ನಿಂದ ಗಲಾಟೆ ಘರ್ಷಣೆಯಾಗಿ ಬೀದಿಗೆ ಬಂದು ನಿಂತಾಗ ಯಾವ ಪುರುಷಾರ್ಥಕ್ಕಾಗಿ ಪಥಸಂಚಲನ ಮಾಡಿ ಜಾಗೃತಿ ಮೂಡಿಸುತ್ತಾರೆ ಎಂಬುದೇ ಯಕ್ಷ ಪ್ರಶ್ನೆ.