ಕೇಂದ್ರ ಸರ್ಕಾರದ ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶಕ್ಕೆ ಆಗ್ರಹ

ಬೆಂಗಳೂರು: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 20 ಸಾವಿರ ಹುದ್ದೆಗಳು ಖಾಲಿಯಾಗಿದ್ದು,ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಒತ್ತಾಯಿಸಿದ್ದಾರೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ವನದಲ್ಲಿ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅವರು ಮಾತನಾಡಿದರು.

ಈ ಹುದ್ದೆಗಳಿಗೆ ಕೇಂದ್ರ ಸಿಬ್ಬಂದಿ ಆಯೋಗ (ಎಸ್‌ಎಸ್‌ಸಿ) ನಡೆಸುವ ಪರೀಕ್ಷೆಗಳಿಗೆ ಕೇವಲ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾತ್ರ ಉತ್ತರ ಬರೆಯಲು ಅವಕಾಶ ಕೊಡಲಾಗಿದೆ.

ಇದರಿಂದ ಕನ್ನಡ ಮಾಧ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುವವರಿಗೆ ವಂಚನೆ ಅಗುತ್ತಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಲಕ್ಷಾಂತರ ನಿರುದ್ಯೋಗಿ ಯುವಕ-ಯುವತಿಯರಿದ್ದಾರೆ.

ಭಾಷಾ ತಾರತಮ್ಯದಿಂದಾಗಿ‌ ಕೇಂದ್ರ ಸರ್ಕಾರದ ಉದ್ಯೋಗದ ಅವಕಾಶದಿಂದ ನಮ್ಮ ರಾಜ್ಯದವರು ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ನಡೆಸುವ ಪರೀಕ್ಷೆಗಳಿಗೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು‌‌ ಎಂದು ನಾರಾಯಣ ಗೌಡ ಆಗ್ರಹಿಸಿದರು.

ಈಗ ಕೇವಲ ಪ್ರತಿಭಟನೆ ಮಾಡಿದ್ದೇವೇ, ಮುಂದಿನ ದಿನಗಳಲ್ಲಿ ಸಚಿವರು,ಲೋಕಸಭಾ ಸದಸ್ಯರ ಮನೆಗಳ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

ಕನ್ನಡದಲ್ಲಿ ಬರೆಯಲು ಅವಕಾಶ ನೀಡದಿದ್ದರೆ ಯಾವುದೇ ಕಾರಣಕ್ಕೂ ಪರೀಕ್ಷೆ ನಡೆಯಲು ಬಿಡುವುದಿಲ್ಲ‌ ಎಂದು ತಿಳಿಸಿದರು.