ಬೆಂಗಳೂರು ಗುಂಡಿಮಯ: ಸರಕಾರದ ವಿರುದ್ಧ ಹೆಚ್.ಡಿ.ಕೆ ಆಕ್ರೋಶ

ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ರಾಜ್ಯ ಸರಕಾರದ ಕಾರ್ಯ ವೈಖರಿಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.

ಇಡೀ ರಾಜ್ಯದಲ್ಲಿನ ಎಲ್ಲ ರಸ್ತೆಗಳು ಗುಂಡಿಗಳಿಂದ ಕೂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಗುಂಡಿಯಿಂದಾಗಿ ಲುಲೂ ಮಾಲ್ ಸಮೀಪ ಮಹಿಳೆಯೊಬ್ಬರು ಬಿದ್ದು ತೀವ್ರವಾಗಿ ಗಾಯಗೊಂಡಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಗುಂಡಿ ಬಿದ್ದ ರಸ್ತೆಗಳು ರಾಜ್ಯದ ಗೌರವವನ್ನು ಮೂರಾಬಟ್ಟೆ ಮಾಡುತ್ತಿವೆ  ಕಿಡಿಕಾರಿದರು.

ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ರಸ್ತೆಗಳು ಗುಂಡಿ ಬಿದ್ದಿರುವ ಸ್ಥಿತಿ ಇದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಇಂತಹ ಕಾನ್ಫರೆನ್ಸ್ ಗಳು ಎಷ್ಟೋ ಆಗಿವೆ. ಆದರೆ ಗುಂಡಿಗಳು ಮಾತ್ರ ಮುಚ್ಚಿಲ್ಲ.

ಎಲ್ಲವೂ ಹಾಗೆಯೇ ಇವೆ. ಜನರ ಜೀವಗಳನ್ನು ಕಾಪಾಡುವ ಕೆಲಸವನ್ನು ಈ ಸರ್ಕಾರ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮಳೆ ಬಂದಿರುವುದು ನಿಜ. ಕರ್ನಾಟಕದಲ್ಲಿ ಮಾತ್ರ ಮಳೆ ಆಗಿಲ್ಲ. ಮಳೆಗೆ ಅಗತ್ಯವಾದ ತಯಾರಿ ಈ ಸರ್ಕಾರ ಮಾಡಿಕೊಂಡಿಲ್ಲ.

ಒರಿಸ್ಸಾ ಸೇರಿದಂತೆ ಅನೇಕ ಕಡೆ ಪ್ರತಿ ವರ್ಷ ಮಳೆ ಬಂದರೂ ಏನೂ ಅಪಾಯ ಆಗಿಲ್ಲ. ತಕ್ಷಣವೇ ಅಲ್ಲಿನ ಸರ್ಕಾರದವರು ಸರಿ ಮಾಡುತ್ತಾರೆ.

ಆದರೆ ನಮ್ಮಲ್ಲಿ ಅಂತಹ ಕೆಲಸ ಆಗುತ್ತಿಲ್ಲ. ಗುಂಡಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಬದಲಿಗೆ ಗುಂಡಿಗಳ ಹೆಸರಲ್ಲಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಎಚ್ ಡಿ ಕೆ ಗಂಭೀರ ಆರೋಪ ಮಾಡಿದರು.

ಅರಸೀಕೆರೆ ಸಮೀಪ ರಸ್ತೆ ಅಪಘಾತ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಅಗತ್ಯವಾದರೆ ಸರ್ಕಾರ ಇಡೀ ರಾಜ್ಯದಲ್ಲಿ ಒಂದು ಸಮೀಕ್ಷೆ ಮಾಡಿಸಲಿ. ಅದನ್ನು ಮಾಡುವ ಬದಲು ಈ ಸರ್ಕಾರ ವಸೂಲಿ ಮಾಡಲು ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆಗಳಲ್ಲಿ, ಹೆದ್ದಾರಿ ರಸ್ತೆಯಲ್ಲಿ ಎಎಸ್ ಐ ಸೇರಿ 3-4 ಜನ ಪೊಲೀಸರು ನಿಂತು ಜನರ ವಾಹನಗಳನ್ನು ನಿಲ್ಲಿಸಿ ವಸೂಲಿ ಮಾಡಲು ನಿಂತಿರುತ್ತಾರೆ. ಬೆಳಗ್ಗೆ ವಸೂಲಿ ಮಾಡಿ ರಾತ್ರಿ ಎಲ್ಲರೂ ಹಂಚಿಕೊಳ್ಳುತ್ತಾರೆ.ಇದು ವಸೂಲಿ ಸರ್ಕಾರ  ದೂರಿದರು.

ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ಪ್ರಾರಂಭವಾಗಿ ಸೋಮವಾರ ಬೆಳಗ್ಗೆವರೆಗೆ ವ್ಯಾಪಾರ, ವಹಿವಾಟು, ಬಾರ್ ಪಬ್ಬಿಗೆ ಎಲ್ಲದಕ್ಕೂ ಸರಕಾರವೇ ಅವಕಾಶ ಕೊಟ್ಟಿದೆ.

ರಾತ್ರಿ ವೇಳೆ ಕುಡಿಯೋದಕ್ಕೆ ಅವಕಾಶ ಕೊಡೋದು ಸರಕಾರವೇ. ಹೋಟೆಲ್ ಗೆ ರಾತ್ರಿ ವೇಳೆ ಅನುಮತಿ ಕೋಡೋದು ಕೂಡ ಸರಕಾರವೇ. ಕುಡಿದ ಮೇಲೆ ಮತ್ತೆ ಹಣ ವಸೂಲಿ ಮಾಡುವುದು ಕೂಡ ಸರಕಾರವೇ ಎಂದು ಮಾಜಿ ಕುಮಾರಸ್ವಾಮಿ ಟೀಕಿಸಿದರು.

ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಕುಂಭಮೇಳದ  ಕಾರ್ಯಕ್ರಮ ಮುಗಿಯುವ ಮುನ್ನವೇ ಕುಂಭಮೇಳಕ್ಕೆ ರಸ್ತೆಗೆ ಹಾಕಿದ್ದ ಡಾಂಬಾರು  ಕಿತ್ತು ಹೋಗಿದೆ ಎಂದು ನನಗೆ ಮಾಹಿತಿ ಬಂದಿದೆ.

ಸ್ವಾಮೀಜಿಗಳು ಎಲ್ಲರೂ ಅಲ್ಲೇ ಇದ್ದರು. ಡಾಂಬಾರು ಹಾಕಿರುವುದರಲ್ಲಿ  40% ಕಮೀಷನ್ ವ್ಯವಹಾರ ಆಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಈ ಸರಕಾರದ ಹಣೆಬರಹ  ಎಂದು ವಾಗ್ದಾಳಿ ನಡೆಸಿದರು.

ಪಂಚರತ್ನ ರಥಯಾತ್ರೆ ಕಾರ್ಯಕ್ರಮ ನವೆಂಬರ್ 1ರಿಂದ ಪ್ರಾರಂಭ ಆಗುತ್ತದೆ. 2-3 ಹಂತದಲ್ಲಿ ರಥಯಾತ್ರೆ ಇರುತ್ತದೆ.

ನವೆಂಬರ್ 1 ರಿಂದ ಫೆಬ್ರವರಿ ಅಂತ್ಯದವರೆಗೂ ನಿರಂತರವಾಗಿ ಪಂಚರತ್ನ ರಥಯಾತ್ರೆ ನಡೆಯುತ್ತದೆ ಎಂದು ಇದೇ ವೇಳೆ ಕುಮಾರಸ್ವಾಮಿ ತಿಳಿಸಿದರು.

ನವೆಂಬರ್ 1 ರಂದು ನಮ್ಮ ಪಕ್ಷದಿಂದ ಮನೆಮನೆ ಮೇಲೆ ಕನ್ನಡ ಬಾವುಟ ಹಾರಿಸುವ ಸಂಕಲ್ಪ ಮಾಡಿದ್ದೇವೆ.

ರಾಜ್ಯದ ಜನರು ಇದರಲ್ಲಿ ಭಾಗವಹಿಸಬೇಕು. ಬುಧವಾರ ಈ ಸಂಬಂಧ ಶಾಸಕರ ಸಭೆ ಕರೆಯಲಾಗಿದೆ. ಅದರಲ್ಲಿ ಕನ್ನಡ ಬಾವುಟ ಹಾರಿಸುವ ಕಾರ್ಯಕ್ರಮದ ರೂಪುರೇಷೆ ಸಿದ್ದ ಮಾಡುತ್ತೇವೆ ಎಂದು ತಿಳಿಸಿದರು.

ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಬಿಡುಗಡೆ ಮಾಡಿದ್ದ ಹಣ ಸಿ.ಪಿ. ಯೋಗೇಶ್ವರ್ ತಡೆ ಹಿಡಿಯಲು ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಇಂತಹ  ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ ಎಂದರು.

ಅವರು ಖುಷಿಗೆ ಇಂತಹದ್ದನ್ನು ಮಾಡುತ್ತಿರುತ್ತಾರೆ. ಇದರಿಂದ ಚನ್ನಪಟ್ಟಣದಲ್ಲಿ ಮತ ಬೀಳೋದಿಲ್ಲ ವ್ಯಂಗ್ಯವಾಡಿದರು.