(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಪೊಲೀಸ್ ಗಣಪ ಎಂದೆ ಹೆಸರುವಾಸಿಯಾದ ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ಪ್ರತಿಷ್ಟಾಪಿಸಿದ್ದ ಗಣಪತಿಯ ವಿಸರ್ಜನಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
60ನೇ ವರ್ಷದ ಪ್ರಯುಕ್ತ ಧರ್ಮರಕ್ಷಕ ಗಣಪತಿಯ ವಿಸರ್ಜನಾ ಮಹೋತ್ಸವ ಹಾಗೂ ಶೋಭಾಯಾತ್ರೆ ವಿಶೇಷವಾಗಿ ನಡೆಯಿತು.
ಗಣಪತಿ ವಿಸರ್ಜನ ಮಹೊತ್ಸವದ ಹಿನ್ನೆಲೆ ಹಮ್ಮಿಕೊಂಡಿದ್ದ ಶೋಭಾ ಯಾತ್ರೆಯಲ್ಲಿ
ನಂದಿ ಧ್ವಜ, ಗೊರವರ ಕುಣಿತ, ವೀರಭದ್ರ ಕುಣಿತ, ಗಾರುಡಿ ಗೊಂಬೆ, ನಾಸಿಕ್ ಡೋಲು ಕುಣಿತ, ಚಂಡೆ ಮದ್ದಾಳೆ, ಡೋಲು ,ಮಹಿಳಾ ವೀರಗಾಸೆ, ಸೇರಿದಂತೆ ಹಲವು ಜಾನಪದ ಕಲಾ ತಂಡಗಳು ಮನಸೂರೆಗೊಂಡವು.
ಶೋಭಾಯಾತ್ರೆ ಮೆರವಣಿಗೆಯು ಖಡಕ್ ಪುರ ಮೊಹಲ್ಲಾ ಬೀದಿ, ಅಂಬೇಡ್ಕರ್ ಬೀದಿ, ಡೀವಿಯಷನ್ ರಸ್ತೆ ಮತ್ತಿತರ ರಸ್ತೆಗಳಲ್ಲಿ ಸಂಚರಿಸಿ ವೀರಭದ್ರಸ್ವಾಮಿ ದೇವಸ್ಥಾನ ಮೂಲಕ ಹಾದು, ಜೈನರ ಬೀದಿ, ಕೊಳದ ಬೀದಿಯಲ್ಲಿ ಮೆರವಣಿಗೆ ಸಾಗಿ ನಂತರ ದೊಡ್ಡ ಅರಸನ ಕೊಳದಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಲಾಯಿತು.
ಪೊಲೀಸ್ ಬಂದೂಬಸ್ತ್.:ಗಣಪತಿ ವಿಸರ್ಜನಾ ಮೆರವಣಿಗೆ ಸಾಗುವ ಪ್ರತಿ ಮಾರ್ಗದಲ್ಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಅವರ ನೇತೃತ್ವದಲ್ಲಿ ವ್ಯಾಪಕ ಪೊಲೀಸ್ ಬಂದೂಬಸ್ತ್ ನಿಯೋಜಿಸಲಾಗಿತ್ತು.
ಜಿಲ್ಲೆಯ ಪೊಲೀಸರಲ್ಲದೆ, ದಕ್ಷಿಣ ವಲಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೂ ಕೂಡ ಕಾರ್ಯನಿರ್ವಹಿಸಿದರು.
ಒಬ್ಬರು ಎಸ್ಪಿ, ಒಬ್ಬರು ಎಎಸ್ಪಿ, ಐವರು ಡಿವೈಎಸ್ಪಿ, 25 ಇನ್ಸ್ಪೆಕ್ಟರ್ಗಳು, 40 ಸಬ್ ಇನ್ಸ್ಪೆಕ್ಟರ್ಗಳು, ಕಮಾಂಡೊ ಪಡೆ, 5 ಕೆಎಸ್ಆರ್ಪಿ ತುಕಡಿಗಳು ಸೇರಿದಂತೆ 800ರಿಂದ 1000 ಸಿಬ್ಬಂದಿಯನ್ನು ಭದ್ರತಾ ವ್ಯವಸ್ಥೆ ನಿಯೋಜಿಸಲಾಗಿತ್ತು.
ಇಲಾಖಾ ಸಿಬ್ಬಂದಿಗೆ 25 ವಿಡಿಯೊ ಕ್ಯಾಮೆರಾ ನೀಡಲಾಗಿತ್ತು.
ಯಾವುದೇ ಅಹಿತಕರ ಘಟನೆ ನಡೆಯದಂತೆ 25 ಸೂಕ್ಷ್ಮ ಪ್ರದೇಶಗಳು, ದೇವಾಲಯ, ಚರ್ಚ್, ಮಸೀದಿಗಳ ಬಳಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿತ್ತು.ಗುಪ್ತಚರ, ಅಪರಾಧ ಘಟಕಗಳನ್ನೂ ನಿಯೋಜಿಸಲಾಗಿತ್ತು.