ಶಿವಮೊಗ್ಗ: ಕೆಲ ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಭಜರಂಗದಳದ ಕಾರ್ಯಕರ್ತ ಹರ್ಷ ಕುಟುಂಬದ ಸದಸ್ಯರಿಗೆ ಮಾರಕಾಸ್ತ್ರಗಳಿಂದ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದ್ದು ಮತ್ತೆ ಆತಂಕ ಸೃಷ್ಟಿಯಾಗಿದೆ.
ಬೆದರಿಕೆ ಅಷ್ಟೇ ಅಲ್ಲ ಯುವಕನನೊಬ್ಬನ ಮೇಲೆ ಕಲ್ಲಿನಿಂದ ಜಜ್ಜಿ ಮಾರಣಾಂತಿಕ ಹಲ್ಲೆ ಕೂಡಾ ಮಾಡಲಾಗಿದೆ.
ಭರ್ಮಪ್ಪನಗರದ 2ನೇ ಅಡ್ಡರಸ್ತೆಯಲ್ಲಿ ರಾತ್ರಿ ಘಟನೆ ನಡೆದಿದ್ದು, ಪ್ರಕಾಶ್ (25) ಎಂಬುವರ ಮೇಲೆ ದಾಳಿ ನಡೆಸಲಾಗಿದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುದ್ದಾರೆ.
ಈ ಘಟನೆಯಿಂದಾಗಿ ಶಿವಮೊಗ್ಗ ಬೂದಿ ಮುಚ್ಚಿದ ಕೆಂಡದಂತಿದೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ದುಷ್ಕರ್ಮಿಗಳ ಬೆದರಿಕೆಯಿಂದಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಕಳೆದ ರಾತ್ರಿ ಸೀಗೆಹಟ್ಟಿಯ ನಿವಾಸ, ರವಿವರ್ಮ ಬೀದಿ, ಕೆ.ಆರ್.ಪುರಂ ರಸ್ತೆ ಮತ್ತಿತರ ಕಡೆ ಎರಡು ಬೈಕ್‍ನಲ್ಲಿ ಬಂದ ಆರು ಮಂದಿ ಯುವಕರು ಒಂದು ಧರ್ಮದ ಪರವಾಗಿ ಘೋಷಣೆ ಕೂಗಿ ಕೈಯಲ್ಲಿ ಮಚ್ಚು ಲಾಂಗು ಹಿಡಿದು ಝಳಪಿಸಿ ಬೆದರಿಕೆ ಹಾಕಿದ್ದಾರೆ.
ಅಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಘೋಷಣೆಗಳನ್ನ ಕೂಗಿ ವಾಪಸ್ ಹೋಗುವಾಗ ಯುವಕನಿಗೆ ಕಲ್ಲಿನಿಂದ ಹೊಡೆದು ತೆರಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.
ನಿಮ್ಮನ್ನು ಬಿಡುವುದಿಲ್ಲ, ಹರ್ಷನನ್ನು ಮುಗಿಸಿದಂತೆ ನಿಮ್ಮನ್ನೂ ಮುಗಿಸುತ್ತೇವೆ. ಸುಮ್ಮನಿದ್ದರೆ ಸರಿ. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಹರ್ಷನ ಸಹೋದರಿ ಅಶ್ವಿನಿ ಪೊಲೀಸರಿಗೆ ಹೇಳಿದ್ದಾರೆ.
ಹರ್ಷನ ವಿಚಾರವನ್ನು ಪದೇ ಪದೇ ಕೆದಕಿದರೆ ಅವನಿಗಾದ ಗತಿಯೇ ನಿಮಗೂ ಆಗುತ್ತದೆ ಎಂದು ಮಾರಕಾಸ್ತ್ರಗಳನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿದರು. ನಮಗೆ ಪೊಲೀಸರು ಸೂಕ್ತ ರಕ್ಷಣೆ ಕೊಡಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಘಟನೆ ಕುರಿತಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಯಿಂದ ಮಾಹಿತಿ ಪಡೆದಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು. ಸಿಸಿಟಿವಿಗಳನ್ನು ಪರಿಶೀಲಿಸಿ ಹರ್ಷನ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿರುವವರನ್ನು ತಕ್ಷಣವೇ ಬಂಧಿಸಬೇಕೆಂದು ಆದೇಶಿಸಿದ್ದಾರೆ.