ಸಿಸಿಬಿ ಭರ್ಜರಿ ಕಾರ್ಯಾಚರಣೆ:23 ಲಕ್ಷ ರೂ. ಬೆಲೆಯ ಗಾಂಜಾ ವಶ; 3 ಮಂದಿ ಅಂದರ್

ಮೈಸೂರು: ನಗರದ ಸಿ.ಸಿ.ಬಿ. ಪೊಲೀಸರು ಮಾದಕವಸ್ತು ಮಾರಾಟಗಾರರ ಮೇಲಿನ ದಾಳಿಯನ್ನು ಮುಂದುವರಿಸಿದ್ದು ಭರ್ಜರಿ ಬೇಟೆಯನ್ನೇ ಹಿಡಿದಿದ್ದಾರೆ.

ಮೂವರನ್ನು ಬಂಧಿಸಿ ಒಟ್ಟು 23 ಲಕ್ಷ ರೂ ಬೆಲೆಯ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಇತ್ತೀಚೆಗೆ ಹಲವಾರು ಗಾಂಜಾ ಹಾಗೂ ಎಂ.ಡಿ.ಎಂ.ಎ. ಡ್ರಗ್ಸ್ ಮಾರಾಟ ಜಾಲಗಳ ಮೇಲೆ ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸಿದ್ದರು.

ಖಚಿತ ಮಾಹಿತಿ‌ ಆದರಿಸಿ ಅ.22ರಂದು ಬನ್ನಿಮಂಟಪದ ಹನುಮಂತನಗರ ರಸ್ತೆಯಲ್ಲಿ ದಾಳಿ ಮಾಡಿದ್ದಾರೆ.

ಅಲ್ಲಿ ಅಕ್ರಮವಾಗಿ ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಗಿರಾಕಿಗಳನ್ನು ಕರೆಸಿ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳ  ಬಳಿ ಇದ್ದ 5 ಕೆ.ಜಿ. 691 ಗ್ರಾಂ ತೂಕದ ಗಾಂಜಾ, ಒಂದು ಮಾರುತಿ 800 ಕಾರು, 10,000 ರೂ ಹಾಗೂ 3 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅದೇ ರೀತಿ 23ರಂದು ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡಿ ಮೊಹಲ್ಲಾ 2ನೇ ಈದ್ಗಾದ ಸಿ.ವಿ. ರಸ್ತೆ 7ನೇ ಕ್ರಾಸ್‍ನಲ್ಲಿರುವ ಮನೆ ಮೇಲೆ ದಾಳಿ ಮಾಡಿದ್ದಾರೆ.

ಗಾಂಜಾವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಆತನಿಂದ 41 ಕೆ.ಜಿ. ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಆರೋಪಿಗಳು ಗಾಂಜಾವನ್ನು ಎಲ್ಲಿಂದ ಮತ್ತು ಯಾರಿಂದ ಖರೀದಿ ಮಾಡಿಕೊಂಡು ತರುತ್ತಿದ್ದರು ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಹಾಗೂ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆ ಕಾರ್ಯ

ಮುಂದುವರೆದಿದೆ.

ಈ ದಾಳಿ ಕಾರ್ಯ ಮೈಸೂರು ನಗರದ ಡಿಸಿಪಿ ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ದಳದ ಗೀತ.ಎಂ. ಮತ್ತು ಸಿಸಿಬಿಯ ಎಸಿಪಿ ಅಶ್ವಥನಾರಾಯಣ.ಸಿ.ಕೆ.ಅವರ ಮಾರ್ಗದರ್ಶನದಲ್ಲಿ ನಡೆಯಿತು.

ಸಿಸಿಬಿಯ ಇನ್ಸ್‌ಪೆಕ್ಟರ್ ಮಲ್ಲೇಶ, ಎಎಸ್ಐ ರಾಜು, ಸಿಬ್ಬಂದಿಗಳಾದ ಅನಿಲ್, ಸುಬಾನಲ್ಲಾ ಬಾಲ್‍ದಾರ್, ಡಿ.ಶ್ರೀನಿವಾಸಪ್ರಸಾದ್, ಜೋಸೆಫ್ ನೊರೋನ್ಹ, ರವಿಕುಮಾರ್, ರಾಧೇಶ್, ಜನಾರ್ಧನರಾವ್, ಶ್ರೀನಿವಾಸ.ಕೆ.ಜಿ., ಅರುಣ್‍ಕುಮಾರ್, ರಘು, ಮಮತ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.