ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ಮಾಹಿತಿ ನೀಡಿದವರಿಗೆ 14 ಲಕ್ಷ ಬಹುಮಾನ ನೀಡುವುದಾಗಿ ಎನ್ ಐಎ ಘೋಷಣೆ ಮಾಡಿದೆ.
ಈ ಕುರಿತು ರಾಷ್ಟ್ರೀಯ ತನಿಖಾ ದಳ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಆರೋಪಿಗಳಾದ ಬೆಳ್ಳಾರೆಯ ಮಹಮ್ಮದ್ ಮುಸ್ತಾಫಾ ಮತ್ತು ಮಡಿಕೇರಿಯ ತುಫೈಲ್ ಬಗ್ಗೆ ಸುಳಿವು ನೀಡಿದರೆ ತಲಾ 5 ಲಕ್ಷ ರೂ. ಬಹುಮಾನ, ಜೊತೆಗೆ ಕೊಲೆಗೆ ಸಹಕಾರ ನೀಡಿದ ಸುಳ್ಯದ ಉಮ್ಮರ್ ಫಾರೂಕ್ ಹಾಗೂ ಬೆಳ್ಳಾರೆಯ ಅಬೂಬಕ್ಕರ್ ಸಿದ್ದಿಕ್ ಬಗ್ಗೆ ಮಾಹಿತಿ ನೀಡಿದರೆ ತಲಾ 2 ಲಕ್ಷ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿದೆ.
ರಾಜ್ಯ ಸರ್ಕಾರ ಎನ್‌ಐಎ ಹೆಗಲಿಗೆ ತನಿಖೆಯ ಜವಾಬ್ದಾರಿಯನ್ನು ವಹಿಸಿದೆ.
ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದ ಎನ್‌ಐಎ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಸುಳ್ಯದ 32 ಕಡೆಗಳಲ್ಲಿ ದಾಳಿ ನಡೆಸಿತ್ತು.
ಕೇರಳದ 7 ಕಡೆ ಆಶ್ರಯ ನೀಡಿದವರು, ಹಂತಕರು ಸೇರಿದಂತೆ 10ಕ್ಕೂ ಹೆಚ್ಚು ಮಂದಿಯನ್ನು ಎನ್‌ಐಎ ಬಂಧಿಸಿದೆ.
ಮಾಹಿತಿದಾರರು info.blr.nia@gov.in ಅಥವಾ ದೂರವಾಣಿ ಸಂಖ್ಯೆ 080-29510900/8904241100 ಅಥವಾ ಪೊಲೀಸ್ ಅಧೀಕ್ಷಕರು, ರಾಷ್ಟ್ರೀಯ ತನಿಖಾ ದಳ (ಎನ್‌ಐಎ), 8ನೇ ಮಹಡಿ, ಸರ್. ಎಂ ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಮಲೂರು, ಬೆಂಗಳೂರು 560071 ಈ ವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ.
ಆರೋಪಿಗಳ ಬಗ್ಗೆ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎನ್‌ಐಎ ತಿಳಿಸಿದೆ.
ಕಳೆದ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿ ದುಷ್ಕರ್ಮಿಗಳು ತಲೆಮರೆಸಿಕೊಂಡಿದ್ದಾರೆ.