ಬೆಂಗಳೂರು: ಕರ್ನಾಟಕವು ಡಿಪ್ಲೊಮಾ ಘಟಿಕೋತ್ಸವವನ್ನು ಆರಂಭಿಸಿದ ದೇಶದ ಮೊಟ್ಟಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ಕ್ಯಾಂಪಸ್ಸಿನಲ್ಲಿ ಡಿಪ್ಲೊಮಾ ಘಟಿಕೋತ್ಸವವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಉದ್ಘಾಟಿಸಿದರು.
ಮೈಸೂರನ್ನು ಪ್ರಗತಿ ಪಥದತ್ತ ಒಯ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ಏಳು ತಾಂತ್ರಿಕ ಶಿಕ್ಷಣ ಕಾಲೇಜುಗಳನ್ನು ಒಳಗೊಂಡಿರುವ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ಕ್ಯಾಂಪಸ್ಸಿಗೆ ಅವರ ಹೆಸರನ್ನೇ ಇಡಲಾಗುವುದು ಎಂದು ಈ ವೇಳೆ ಸಚಿವರು ಹೇಳಿದರು.
ಜತೆಗೆ ತಾಂತ್ರಿಕ ಶಿಕ್ಷಣ ಆಯುಕ್ತಾಲಯವನ್ನು ಅವರ ಧ್ಯೇಯ ಆದರ್ಶ ಮತ್ತು ದೂರದೃಷ್ಟಿಗಳನ್ನು ಪ್ರತಿಬಿಂಬಿಸುವಂತೆ ರೂಪಿಸಲಾಗುವುದು ಎಂದು ತಿಳಿಸಿದರು.
1905ರಲ್ಲಿ ಮೈಸೂರಿನಲ್ಲಿ ಮೊಟ್ಟಮೊದಲ ತಾಂತ್ರಿಕ ಶಾಲೆ ಸ್ಥಾಪಿಸಿದ ನಾಲ್ವಡಿಯವರು ಮತ್ತು ನಂತರ ದಿವಾನರಾಗಿ ಬಂದ ವಿಶ್ವೇಶ್ವರಯ್ಯನವರು ರಾಜ್ಯದ ತಾಂತ್ರಿಕ ಶಿಕ್ಷಣದ ರೂವಾರಿಗಳಾಗಿದ್ದಾರೆ ಎಂದು ಅಶ್ವಥ್ ನಾರಾಯಣ ಹೇಳಿದರು.
ಅವರ ದೂರದೃಷ್ಟಿಯ ಫಲವಾಗಿ ಇಂದು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ವಿದೇಶಿ ವಿ.ವಿ.ಗಳೊಂದಿಗೆ ಅತ್ಯಧಿಕ ಒಡಂಬಡಿಕೆಗಳಾಗುತ್ತಿದ್ದು, ದೂರದ ಅಮೆರಿಕದಲ್ಲೂ ಮೆಚ್ಚುಗೆ ಗಳಿಸಿದೆ.
ಹೀಗಾಗಿ ನಾಲ್ವಡಿಯವರ ಹೆಸರಿನಲ್ಲೇ ಈ ಘಟಿಕೋತ್ಸವ ಆಚರಿಸುವ ಸಂಪ್ರದಾಯವನ್ನು ಈ ವರ್ಷದಿಂದ ಆರಂಭಿಸಲಾಗುತ್ತಿದೆ.
ಇದರ ಹಿಂದೆ ದೇಶದಾದ್ಯಂತ ವಿಶ್ವಕರ್ಮ ದಿನಾಚರಣೆಯಂದೇ ಐಟಿಐ ಘಟಿಕೋತ್ಸವ ನಡೆಸಲು ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣೆಯೂ ಇದೆ ಎಂದು ಅವರು ಹೇಳಿದರು.
2022ರ ಡಿಪ್ಲೊಮಾ ಶಿಕ್ಷಣದ ಹಲವು ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ತೋರಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಪ್ರದಾನ ಮಾಡಿದರು.
ಸಿವಿಲ್ ಡಿಪ್ಲೊಮಾದಲ್ಲಿ ಶಿರಸಿಯ 70ರ ಹಿರಿಯರಾದ ನಾರಾಯಣ ಭಟ್ ಶೇ.94.88ರಷ್ಟು ಅಂಕ ಗಳಿಸುವ ಮೂಲಕ ಪ್ರಥಮ ರ್‍ಯಾಂಕ್ ಪಡೆದುಕೊಂಡಿರುವುದು ನಿಜಕ್ಕೂ ವಿಶೇಷ.