ತಾಯ್ನಾಡಿಗೆ ಮರಳಿದ ನಿವೃತ್ತ ಯೋಧರಿಗೆ ಭವ್ಯ ಸ್ವಾಗತ ಕೋರಿದ ಜನತೆ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಭಾರತೀಯ ಸೇನೆಯಲ್ಲಿ ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಹೊಂದಿ ಸ್ವಗ್ರಾಮಕ್ಕೆ ಮರಳಿದ ಯೋಧರಿಗೆ ಭವ್ಯ ಸ್ವಾಗತ ಕೋರಲಾಯಿತು.

ತಾಯ್ನಾಡು ಚಾಮರಾಜನಗರಕ್ಕೆ ಬಂದಿಳಿದ ನಿವೃತ್ತ ಯೋಧ ಅಂತೋಣಿ ರೂಬಿನ್ ಮೋಸೆಸ್ ಅವರನ್ನು ನಗರದ  ಭುವನೇಶ್ವರಿ ವೃತ್ತದಲ್ಲಿ ವಿಶೇಷವಾಗಿ ಸ್ವಾಗತಿಸಲಾಯಿತು.

ನಗರದ ಸಂತ ಪೌಲರ ದೇವಾಲಯದ ಧರ್ಮಗುರುಗಳಾದ ಸ್ವಾಮಿ ಅಂತೋಣಪ್ಪ ಸಿ.,  ಶಾಸಕ ಸಿ.ಪುಟ್ಟರಂಗಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಹೂಗುಚ್ಚ ನೀಡಿ ಶಾಲುಹೊದಿಸಿ ಸನ್ಮಾನಿಸಿ ಬರಮಾಡಿಕೊಂಡರು.

ಇದಕ್ಕೂ ಮುನ್ನಾ ನಗರದ ಮೈಸೂರು ರಸ್ತೆಯಲ್ಲೂ ಕುಟುಂಬಸ್ಥರು, ಗೆಳೆಯರು, ಅಭಿಮಾನಿಗಳು  ಪಟಾಕಿ ಸಿಡಿಸಿ, ಹೂಗುಚ್ಚ ನೀಡಿ ಅಂತೋಣಿ ರೂಬಿನ್ ಮೋಸೆಸ್ ಅವರಿಗೆ ಸ್ವಾಗತ ಕೋರಲಾಯಿತು.

ತೆರೆದ ಜೀಪ್‌ನಲ್ಲಿ ಬೈಕ್  ರ‍್ಯಾಲಿಯೊಂದಿಗೆ  ರಾಮಸಮುದ್ರಕ್ಕೆ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಅಂತೋಣಿ ರೂಬಿನ್ ಮೋಸೆಸ್ ಅವರು ಮಾಲಾರ್ಪಣೆ ಮಾಡಿದರು.

ನಂತರ ಸಂತ ಪೌಲರ ದೇವಾಲಯದಲ್ಲಿ  ಪ್ರಾರ್ಥನೆ ಸಲ್ಲಿಸಿದರು.

ಅಂತೋಣಿ ರೂಬಿನ್ ಮೋಸೆಸ್ ಅವರು ನಗರದ ದಿವಂಗತ ಬಿ.ಜೋಸೆಫ್ ಮತ್ತು ಶ್ರೀಮತಿ ಜುಲೇನ್ ಅವರ ಪುತ್ರರಾಗಿದ್ದು, ನಿವೃತ್ತ ಮುಖ್ಯ ಶಿಕ್ಷಕ ಜೋಸೆಫ್ ರಾಜು ಅವರ ಅಳಿಯರಾಗಿದ್ದಾರೆ.

ದೇಶಾಭಿಮಾನ ಬೆಳಸಿಕೊಳ್ಳಿ : ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂತೋಣಿ ರೂಬಿನ್ ಮೋಸೆಸ್ ಅವರು ಭಾರತೀಯರಾದ ಎಲ್ಲರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ನಾನು ೨೦೦೦ನೇ ಸಾಲಿನಲ್ಲಿ  ಭಾರತೀಯ ಸೇನೆ ಸೇರಿದ್ದೆ ಎಂದು ಹೇಳಿದರು.

ಬೆಂಗಳೂರು, ಬೆಳಗಾಂ ಭಾರತದ ಕಾರ್ಗಿಲ್, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ರಾಜಸ್ತಾನ, ಗುಜರಾತ್, ನ್ಯೂಡೆಲ್ಲಿ, ಅರುಣಾಚಲ ಪ್ರದೇಶ ಹಾಗೂ ಕರ್ನಾಟಕ ಮುಂತಾದ ಪ್ರದೇಶಗಳಲ್ಲಿ  ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿ ಬಂದಿದ್ದೇನೆ ಎಂದರು.

ನಿವೃತ್ತಿ ಜೀವನದಲ್ಲೂ ಸುಮ್ಮನೆ ಕೂರದೆ ಏನಾದರು ಕೆಲಸ ಮಾಡುವುದಾಗಿ ಮೋಸೆಸ್ ತಿಳಿಸಿದರು.

ಸೇನೆ ಎಂದರೆ ಭಯಬೇಡ. ಸಾವು  ಎಲ್ಲಿದ್ದರೂ ಬರುತ್ತದೆ. ಅಲ್ಲಿದ್ದರೂ ಬರುತ್ತದೆ. ಇದ್ದು ಸಾಧಿಸುವ ಖುಷಿ ಎಲ್ಲರಲ್ಲೂ ಇರಬೇಕು. ಎಲ್ಲರೂ ದೇಶಸೇವೆ, ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.