ಕರ್ನಾಟಕ ರತ್ನ ಪ್ರಶಸ್ತಿ ಅಭಿಮಾನಿಗಳಿಗೆ ಸಲ್ಲುತ್ತದೆ -ರಾಘವೇಂದ್ರ ರಾಜಕುಮಾರ್

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಚೆಲುವ ಚಾಮರಾಜನಗರದ ರಾಯಭಾರಿಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕರೆ ಕಣ್ಣಿಗೆ ಒತ್ತುಕೊಂಡು ಸ್ವೀಕರಿಸುತ್ತೇನೆ ಎಂದು ನಟ ರಾಘವೇಂದ್ರ ರಾಜಕುಮಾರ್ ಹೇಳಿದರು.

ಚಾಮರಾಜನಗರದ ಡಾ.ರಾಜಕುಮಾರ್ ಜಿಲ್ಲಾ ಕಲಾಮಂದಿರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ದಿ.ಪುನೀತ್ ರಾಜಕುಮಾರ್ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದ ನಂತರ ‌ಅವರು ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.

ನಮ್ಮ ಊರಿಗೆ ನಾವು ಬಂದು ಮಾತನಾಡುವುದು ಖುಷಿಯ ವಿಚಾರ. ನಮ್ಮ ಮನೆಯಲ್ಲಿ ಮಾತಾನಾಡಿದ ಹಾಗೇ ಆಯಿತು. ಈ ಪ್ರದೇಶಕ್ಕೆ ಆಗಾಗ್ಗೆ ಬರಲು ಅವಕಾಶ ಮಾಡಿಕೊಡುವಂತೆ ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

ಪುನೀತ್ ರಾಜಕುಮಾರ್‌ ಚೆಲುವ ಚಾಮರಾಜನಗರ ರಾಯಭಾರಿಯಾಗಿದ್ದರು.

ಅದನ್ನು ತಮ್ಮ ಕುಟುಂಬದ ಯಾರಾದರೂ ಮುಂದುವರಿಸುತ್ತೀರ ಎಂಬ ಪ್ರಶ್ನೆಗೆ ನಾನು ಪುನೀತ್  ಆಗಲು ಸಾಧ್ಯವಿಲ್ಲ. ಅಂತಹ ಕೆಲಸ ಕೊಟ್ಟರೆ ನನ್ನ ತಲೆಗೆ, ಕಣ್ಣಿಗೆ ಒತ್ತುಕೊಂಡು ಮಾಡುತ್ತೇನೆ. ಅಣ್ಣನಾಗಿ ಅದನ್ನು ನೆರವೇರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.

ನಮ್ಮ ಕುಟುಂಬದಲ್ಲಿ ಎರಡು ಕರ್ನಾಟಕ ರತ್ನ ಬರುವಂತೆ ಮಾಡಿರುವವರು ಅಭಿಮಾನಿಗಳು ಎಂದು ಧನ್ಯತೆಯಿಂದ ಹೇಳಿದರು.

ಅಪ್ಪುಗೆ ಕೊಟ್ಟಿರುವ ಕರ್ನಾಟಕ ರತ್ನ ಪ್ರಶಸ್ತಿ ಅಭಿಮಾನಿಗಳಿಗೆ ಸಲ್ಲುತ್ತದೆ. ನಾವು ಬರಿ ಕೈಯಲ್ಲಿ ಬಂದು ಬರಿ ಕೈಯಲ್ಲಿ ಹೋಗುತ್ತೇವೆ.  ಪ್ರಶಸ್ತಿ ಎಲ್ಲ ಅಭಿಮಾನಿಗಳಿಂದ ಬಂದಿದ್ದು ಅದೆಲ್ಲ ಅಭಿಮಾನಿಗಳಿಗೇ ಸೇರಬೇಕು ಎಂದು ತಳಿಸಿದರು.

ಗಂದಧ ಗುಡಿ ಸಿನಿಮಾದಲ್ಲಿ ಒಳ್ಳೆಯ ಸಂದೇಶವಿದೆ. ಬಹುಶಃ ಇಷ್ಟು ವರ್ಷಗಳ ಕಾಲ ಅಪ್ಪು ಇದಕ್ಕೇ ಅಡಿಪಾಯ ಹಾಕುತ್ತಿದ್ದ ಅನ್ನಿಸುತ್ತದೆ.

ಜನರ ಪ್ರೀತಿ ಸಂಪಾದನೆ ಮಾಡಬೇಕು ಅಂತ 20 ಸಿನಿಮಾ ಮಾಡಿ ಜನರ ಪ್ರೀತಿ ಸಂಪಾದನೆ ಮಾಡಿದ್ದ.

ಪವರ್ ಸ್ಟಾರ್ ಆದ ಬಳಿಕ ಅದನ್ನು ಕಳಚಿ ಇಟ್ಟು ಒಬ್ಬ ಸಾಮಾನ್ಯ ಪುನೀತ್ ಆಗಿ ಜನರಿಗೆ ಸಂದೇಶ ಕೊಟ್ಟಿದ್ದಾನೆ.

ಪರಿಸರ ಕಾಪಾಡಿ, ಪರಿಸರನೇ ಪರಮಾತ್ಮ, ನೀರನ್ನು ಜೋಪಾನವಾಗಿ ಬಳಸಿ. ಪ್ಲಾಸ್ಟಿಕ್ ಬಳಸಬೇಡಿ. ಪ್ರಾಣಿ, ಕಾಡುಗಳನ್ನು ರಕ್ಷಣೆ ಮಾಡಿ. ಎಲ್ಲ ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿ ಅಂತ ಹೇಳುತ್ತಾನೆ.

ಇದನ್ನು ಅಭಿಮಾನಿಗಳು ಪಾಲಿಸಿದರೆ ಪುನೀತ್ ರಾಜಕುಮಾರ್‌ಗೆ ಗೌರವ ಸಲ್ಲಿಸಿದಂತಾಗುತ್ತದೆ. ಇದಕ್ಕಾಗಿಯೇ ಆತ ಭೂಮಿ ಮೇಲೆ ಬಂದಿದ್ದು, ಆ ಕೆಲಸ ಮುಗಿಯಿತು ಹೊರಟು ಹೋದ ಎಂದು ಭಾವುಕರಾಗಿ ರಾಘವೇಂದ್ರ ರಾಜ್ ಕುಮಾರ್ ನುಡಿದರು