ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ನಡೆದಿದ್ದ ಶಿಶುಗಳ ಸಾವಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್ ಸವಾಲು ಹಾಕಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲೆಗಳು ಇಲ್ಲದೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದರಿಂದ ತಾಯಿ ಮತ್ತು ಶಿಶುಗಳು ಮೃತಪಟ್ಟ ಕಾರಣ ನಾನು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಹಾಗೇ ಆಗಲಿ ಎಂದರು.
ಈ ಹಿಂದೆ ಅವರ ಅಧಿಕಾರಾವಧಿಯಲ್ಲಿ ಎಷ್ಟು ತಾಯಿಂದಿರು, ಶಿಶುಗಳು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ನಾನು ಅಂಕಿ ಅಂಶಗಳ ದಾಖಲೆ ಕೊಡುವೆ.
ಅವರು ನೈತಿಕ ಹೊಣೆ ಹೊತ್ತು ಸಿಎಲ್ಪಿ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ನಾನು ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು.
ಮೈಸೂರು ಭಾಗವೊಂದರಲ್ಲೇ ಎಷ್ಟು ಶಿಶುಗಳು ಈ ರೀತಿ ಸಾವನ್ನಪ್ಪಿವೆ ಎಂಬುವುದನ್ನು ಅವರು ಮರೆತಿರಬೇಕು.
ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆ ಕೊಡಿಸಿ ನಂತರ ಪರಿಶೀಲನೆ ನಡೆಸಬೇಕೆಂದು ಸೂಚಿಸಲಾಗಿದೆ. ಆದರೂ ಕೆಲವರು ಈ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಇನ್ನು ಮುಂದೆ ಅವಘಡಗಳು ಮರುಕಳಿಸಿದರೆ ಅವರನ್ನು ಸೇವೆಯಿಂದ ಅಮಾನತುಪಡಿಸಿ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಸೂಚಿಸಲಾಗಿದೆ ಎಂದು ಹೇಳಿದರು.
ತುಮಕೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಅಕಾರಿಗಳನ್ನು ಸೇವೆಯಿಂದ ಅಮಾನತುಪಡಿಸಿದ್ದೇವೆ.
ಅಲ್ಲದೆ ಜಿಲ್ಲಾಸ್ಪತ್ರೆಯ ಕೆಲವು ಅಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಮೃತಪಟ್ಟ ತಾಯಿಗೆ ಒಂದು ಹೆಣ್ಣು ಮಗುವಿದೆ ಎಂಬ ಮಾಹಿತಿ ಇದೆ. ಆ ಮಗುವಿನ ವಿದ್ಯಾಭ್ಯಾಸಕ್ಕಾಗಿ 5 ಲಕ್ಷ ಹಣವನ್ನು ಬ್ಯಾಂಕ್ನಲ್ಲಿ ಎಫ್ಡಿ ಮಾಡುವುದಾಗಿ ಸುಧಾಕರ್ ಹೇಳಿದರು.