ಮೈಸೂರು: ಚಲನಚಿತ್ರ ನಿರ್ಮಾಣ ವ್ಯವಹಾರದಲ್ಲಿ ಹಣ ತೊಡಗಿ ಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಒಂದೇ ಕುಟುಂಬದ ಮೂವರು 27.64 ಲಕ್ಷ ರೂ. ವಂಚಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವಿವೇಕಾನಂದ ಸರ್ಕಲ್ ನಿವಾಸಿ ಕೆ.ಎಸ್.ಸಿದ್ದಾರ್ಥ್(33) ವಂಚನೆಗೊಳಗಾದವರು.
ಇವರು ಈ ಹಿಂದೆ ಕುವೆಂಪುನಗರದ ಗಗನಚುಂಬಿ ರಸ್ತೆಯಲ್ಲಿರುವ ಸುಂದರಂ ಫೈನಾನ್ಸ್‌ನಲ್ಲಿ ಬ್ಯುಸಿನೆಸ್ ಡೆವಲಪ್‌ಮೆಂಟ್ ಆಫೀಸರ್ ಆಗಿದ್ದರು.
ಅಲ್ಲಿ ಕೆಲಸ ಮಾಡುತ್ತಿದ್ದಾಗ ಅದೇ ಕಂಪನಿಯಲ್ಲಿ ಕ್ಲಸ್ಟರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಶ್ರೀಧರ್.ಎಸ್ ನವುಂದ ಅವರು ತಮ್ಮ ಸಹೋದರ ಭರತ್ ಎಸ್. ನವುಂದ ಮತ್ತು ಸಹೋದರಿ ನಾಗರತ್ನ ಎಸ್. ನವುಂದ ಅವರುಗಳು ಚಲನಚಿತ್ರ ನಿರ್ಮಾಣ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸುತ್ತಿದ್ದಾರೆ ಎಂದು ನಂಬಿಸಿದ್ದಾರೆ.
ಹೀಗೆ ನಂಬಿಸಿ ಸಿದ್ಧಾರ್ಥ್ ಅವರಿಂದ 2021ರ ಜುಲೈ 27ರಿಂದ 2022ರ ಫೆಬ್ರವರಿವರೆಗೆ 55 ಲಕ್ಷ ರೂ.ಗಳನ್ನು ಪಡೆದಿದ್ದಾರೆ.
ನಂತರ 27,35,800 ರೂ. ಮಾತ್ರ ಹಿಂತಿರುಗಿಸಿದ್ದು, ಉಳಿದ 27,64,200 ರೂ. ನೀಡದೇ ವಂಚಿಸಿದ್ದಾರೆ.
ತಮ್ಮ ಹಣ ಹಿಂತಿರುಗಿಸುವಂತೆ ಕೇಳಿದಾಗ ಮೂವರು ಆರೋಪಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಿದ್ದಾರ್ಥ ಆರೋಪಿಸಿದ್ದು ಕುವೆಂಪುನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.