ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿ ಹತ್ಯೆ: ಇಬ್ಬರ ಬಂಧನ

ಮೈಸೂರು: ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿ ಹತ್ಯೆ ಸಂಬಂಧ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಚಂದ್ರ ಗುಪ್ತ ಈ ವಿಷಯ ತಿಳಿಸಿದರು.

ನ. 4 ರಂದು ಮಾನಸಗಂಗೋತ್ರಿ  ಆವರಣದಲ್ಲಿ  ಅಪರಿಚಿತ ವಾಹನದಿಂದ   ಡಿಕ್ಕಿ ಹೊಡೆಸಿ ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿ  ಆರ್.ಎನ್.ಕುಲಕರ್ಣಿ ಅವರನ್ನು ಹತ್ಯೆ ಮಾಡಿ‌ ಅಪಘಾತ‌ ಎಂಬಂತೆ ಬಿಂಬಿಸಲಾಗಿತ್ತು.

ಕೊಲೆ ಪ್ರಕರಣ‌ ಸಂಬಂಧ ವಿಶೇಷ ತಂಡ ರಚಿಸಿದ್ದು ತನಿಖೆ ನಡೆಸುತ್ತಿತ್ತು.

ತನಿಖೆ ವೇಳೆ ಕುಲಕರ್ಣಿಯವರ ಪಕ್ಕದ ಮನೆಯ ಮಾದಪ್ಪ ಮತ್ತು ಆರ್.ಎನ್.ಕುಲಕರ್ಣಿ ನಡುವೆ ಮನೆ ಕಟ್ಟುವ ವಿಚಾರವಾಗಿ ಗಲಾಟೆ ನಡೆದಿತ್ತು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಕರ್ಣಿ ಅವರ ಪಕ್ಕದ ಮನೆಯ‌‌‌‌ ನಿವಾಸಿ ಮಾದಪ್ಪ ಎಂಬವರ ಮಗ‌ ಸೇರಿ ಇಬ್ಬರು ವ್ಯಕ್ತಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾದಪ್ಪನ ಪುತ್ರ , ಕಟ್ಟಡ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿದ್ದ  ಮನು(30) ಮತ್ತು ಮತ್ತೋರ್ವ ಮೈಸೂರು ನಿವಾಸಿ ಬಂಧಿತರು.

ಅರುಣ್ ಗೌಡ ಹಾಗೂ ಮನು  ಸ್ನೇಹಿತರು.

ಆತ ಆರ್.ಎನ್ ಕುಲಕರ್ಣಿ ವಾಯುವಿಹಾರಕ್ಕೆ ಬರುತ್ತಿದ್ದ ಸ್ಥಳಗಳನ್ನು‌ ಅರುಣ್ ಗೌಡ ದ್ವಿಚಕ್ರವಾಹನದಲ್ಲಿ ಕರೆತಂದು ತೋರಿಸಿದ್ದು, ಇಬ್ಬರೂ ಸೇರಿ ಕೊಲೆಗೆ ಸ್ಕೆಚ್ ರೂಪಿಸಿದ್ದರು.

ಮನು ತನ್ನ ತಂದೆ ಮಾದಪ್ಪನಿಗೂ ವಿಚಾರ ತಿಳಿಸದೇ ಆರ್.ಎನ್.ಕುಲರ್ಣಿಯವರ ಹತ್ಯೆಗೆ ಮುಂದಾಗಿದ್ದ.

ಸಿಸಿಟಿವಿಯಲ್ಲಿನ ದೃಶ್ಯಗಳನ್ನು ತಪಾಸಣೆ ನಡೆಸಿದ ಪೊಲೀಸರಿಗೆ ದ್ವಿಚಕ್ರವಾಹನದಲ್ಲಿ ವ್ಯಕ್ತಿಯೊಬ್ಬ ಬಂದು ಸ್ಥಳ ತೋರಿಸುತ್ತಿರುವುದು ಗೊತ್ತಾಗಿದೆ.

ಇದರಿಂದ ಅನುಮಾನಗಳು ಹುಟ್ಟಿ ಠಾಣೆಗೆ ಕರೆಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಮನು ಬಾಯ್ಬಿಟ್ಟಿದ್ದಾನೆ.ಇನ್ನೂ ಕೂಡ ಪ್ರಕರಣ ಸಂಬಂಧ ತೀವ್ರ ವಿಚಾರಣೆ ನಡೆಯುತ್ತಿದೆ ಎಂದು ಚಂದ್ರ ಗುಪ್ತ ತಿಳಿಸಿದರು.