ಗಿರವಿ ಇಟ್ಟವರಿಗೆ ಪಂಗನಾಮ ಹಾಕಿ ಪೇರಿ ಕಿತ್ತ ವ್ಯಾಪಾರಿ: ಕಣ್ಣೀರಿಡುತ್ತಿರುವ ಗ್ರಾಹಕರು

ಮೈಸೂರು: ಚಿನ್ನಬೆಳ್ಳಿ ಗಿರವಿ ಇಟ್ಟವರಿಗೆ ಪಂಗನಾಮ ಹಾಕಿ ವ್ಯಾಪಾರಿ ಪೇರಿ ಕಿತ್ತಿರುವ ಘಟನೆ ಮೈಸೂರಿನಲ್ಲಿ  ನಡೆದಿದ್ದು ಗ್ರಾಹಕರು ಕಣ್ಣೀರಿಡುತ್ತಿದ್ದಾರೆ.

ಚಿನ್ನಬೆಳ್ಳಿ ಪದಾರ್ಥಗಳ ಗಿರವಿ ಅಂಗಡಿ ಮಾಲೀಕ  ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿಗಳನ್ನು ವಂಚಿಸಿ ಪರಾರಿಯಾಗಿರುವ ಘಟನೆ ವಿವೇಕಾನಂದ ನಗರದಲ್ಲಿ ನಡೆದಿದೆ.

ಮೈಸೂರಿನ ವಿವೇಕಾನಂದ ವೃತ್ತದಲ್ಲಿರುವ ಮಾರುತಿ ಪಾನ್ಜ್ಯುವೆಲ್ಲರಿ ಶಾಪ್ ಮಾಲೀಕ ನೇಮಿರಾಮ(50) ಪರಾರಿಯಾದ ವಂಚಕ.

ಈತ ಕಳೆದ ಏಳೆಂಟು ವರ್ಷದಿಂದ ವಿವೇಕಾನಂದ ನಗರದಲ್ಲಿ ಮಾರುತಿ ಪಾನ್ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ದು ಕಷ್ಟವೆಂದು ಬಂದ ಗ್ರಾಹಕರಿಂದ ಚಿನ್ನಬೆಳ್ಳಿ ಪದಾರ್ಥಗಳನ್ನು ಅಡವಿರಿಸಿಕೊಂಡು ಹಣ ನೀಡುತ್ತಿದ್ದ.

ಕೊರೋನಾ ಸಂದರ್ಭದಲ್ಲಿನ ಲಾಕ್ ಡೌನ್ ಬಳಿಕ ಸಾಕಷ್ಟು ಆರ್ಥಿಕ ಸಂಕಷ್ಟ ಅನುಭವಿಸಿದ್ದ.

ಶ್ರೀರಾಂಪುರದಲ್ಲಿರುವ ತನ್ನ ನಿವಾಸವನ್ನು ಮೋಸದಿಂದ ಮೂವರಿಗೆ ಅಗ್ರಿಮೆಂಟ್ ಮಾಡಿಸಿ ಹಣ ಪಡೆದಿದ್ದ.

ಅಲ್ಲದೆ ಮತ್ತೊಬ್ಬ ವ್ಯಕ್ತಿಗೂ ನೋಂದಣಿ ಮಾಡಿಸಿಕೊಟ್ಟು ಹಣ ಪಡೆದಿದ್ದ.

ಈತ ಸೋಮವಾರ ರಾತ್ರೋ ರಾತ್ರಿ ತನ್ನ ಬಳಿ ಗಿರವಿ ಇಟ್ಟಿದ್ದ ಚಿನ್ನಬೆಳ್ಳಿಯ ಪದಾರ್ಥಗಳು, ಹಾಗೂ ಹಣದ ಜೊತೆ ಕುಟುಂಬ ಸಮೇತ ಊರನ್ನೇ ಬಿಟ್ಟು ಪರಾರಿಯಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆಯೇ ಆತನ ಬಳಿ ಗಿರವಿ ಇಟ್ಟ ಗ್ರಾಹಕರು ಅಂಗಡಿ ಬಳಿ ಬಂದು ಚಿನ್ನ ಮತ್ತು ಬೆಳ್ಳಿಯ ಪದಾರ್ಥಗಳನ್ನು ಕಳೆದುಕೊಂಡಿದ್ದಕ್ಕೆ ಗೋಳಾಡುತ್ತಿದ್ದಾರೆ.

ಇತ್ತ ಮನೆ ಖರೀದಿಗೆ ಮುಂದಾದವರು ಹಣವೂ ಇಲ್ಲದೆ, ಮನೆಯೂ ಇಲ್ಲದೆ ಕಂಗಾಲಾಗಿದ್ದಾರೆ.

ವಂಚಕ ಕುವೆಂಪುನಗರ ಪೊಲೀಸ್ ಠಾಣೆಯ ಕೆಲ ಪೊಲೀಸ್ ಸಿಬ್ಬಂದಿ ಜೊತೆ  ಸ್ನೇಹಬೆಳೆಸಿಕೊಂಡಿದ್ದ.

ಪೊಲೀಸ್ ಸಿಬ್ಬಂದಿಗಳ ಪರಿಚಯವಿದ್ದುದರಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದೆಂದು ವಂಚನೆ ಮಾಡಿ  ಪರಾರಿಯಾಗಿದ್ದಾನೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ ಭಾವಚಿತ್ರವೊಂದು ವೈರಲ್ ಆಗಿದೆ.

ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ನೇಮಿರಾಮನ ಪತ್ತೆಗೆ ಬಲೆ ಬೀಸಿದ್ದಾರೆ.