ಕೊಪ್ಪಳ: ಕೊಪ್ಪಳದಲ್ಲಿರುವ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಹನುಮ ಮಾಲಾಧಾರಿಗಳಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸುವಂತೆ ಮುಜರಾಯಿ ಸಚಿವೆ ಶಶಿಕಲಾ ಅ ಜೊಲ್ಲೆ ಸೂಚಿಸಿದ್ದಾರೆ.
ಡಿಸೆಂಬರ್ 5 ರಂದು 2 ಲಕ್ಷಕ್ಕೂ ಹೆಚ್ವು ಹನುಮ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆಯಿದೆ.
ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಅಚ್ಚುಕಟ್ಟು ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ಕಲ್ಪಿಸಬೇಕೆಂದು ಅವರು ಸೂಚಿಸಿದರು.
ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪ್ರಮುಖ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಚಿವರು ಸಭೆ ನಡೆಸಿದರು.
ನಂತರ ಮಾಲಾಧಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿ ಸ್ಥಳ ವೀಕ್ಷಣೆ ನಡೆಸಿ ದರು.
ಅಂಜನಾದ್ರಿ ಬೆಟ್ಟ ಪುರಾಣ ಪ್ರಸಿದ್ದ ಹನುಮನ ಜನ್ಮಸ್ಥಳ. ಅಯೋಧ್ಯೆ ರಾಮ ಭೂಮಿಗೆ ಇರುವಷ್ಟೇ ಪ್ರಾಮುಖ್ಯತೆ ಈ ಸ್ಥಳಕ್ಕಿದೆ.
ಪ್ರತಿ ವರ್ಷ ಹನುಮ ಮಾಲಾಧಾರಿಗಳು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಮಾಲೆಯನ್ನು ವಿಸರ್ಜಿಸುತ್ತಾರೆ.
ಸ್ಥಳದಲ್ಲಿ ಭಕ್ತರು ಅಗತ್ಯ ಸೌಕರ್ಯಗಳಿಲ್ಲದೆ ತೊಂದರೆಗೀಡಾಗುವುದನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ದೇಶದಾದ್ಯಂತ ಈ ಸ್ಥಳದ ಮಹಿಮೆಯನ್ನು ಸಾರುವ ನಿಟ್ಟಿನಲ್ಲಿ ಎಲ್ಲಾ ಸೌಕರ್ಯಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದ ರೀತಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಯಾವುದೇ ಲೋಪದೋಷಗಳು ಆಗದಂತೆ ಸಿದ್ದತೆಗಳನ್ನು ನಡೆಸುವ ನಿಟ್ಟಿನಲ್ಲಿ ಸಮಿತಿಗಳನ್ನು ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಭಕ್ತಾದಿಗಳಿಗೆ ಶುದ್ದ ಕುಡಿಯುವ ನೀರು ಮತ್ತು ಉತ್ತಮ ಊಟದ ವ್ಯವಸ್ಥೆಯನ್ನು ಕಲ್ಪಿಸಬೇಕು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳ ರಕ್ಷಣೆಗೆ ಸಿಸಿ ಟಿವಿಗಳನ್ನ ಅಳವಡಿಸಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒದಗಿಸಬೇಕು ಎಂದು ತಿಳಿಸಿದರು.
ಭಕ್ತಾದಿಗಳು ರಾತ್ರಿ ಹೊತ್ತಿನಲ್ಲಿ ಸರಾಗವಾಗಿ ಚಲಿಸುವಂತೆ ಎಲ್ಲಾ ಪ್ರಮುಖ ಪ್ರದೇಶಗಳಲ್ಲೂ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ದೂರದ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.
ಬೆಟ್ಟದ ಕೆಳಭಾಗಕ್ಕೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಎಲ್ಲಾ ಪ್ರದೇಶಗಳಲ್ಲೂ ಕೂಡಾ ಭಕ್ತಾದಿಗಳಿಗೆ ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು.
ಭಕ್ತಾದಿಗಳಿಗೆ ಸ್ನಾನದ ವ್ಯವಸ್ಥೆ ಹಾಗೂ ಅವರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆಯ ವತಿಯಿಂದ ಕ್ಲಿನಿಕ್ ಮತ್ತು ಆಂಬ್ಯೂಲೆನ್ಸ್ಗಳನ್ನು ನಿಯೋಜಿಸಲಾಗುವುದು.
ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ವೈದ್ಯರು ಮತ್ತು ನರ್ಸಗಳನ್ನು ನಿಯೋಜಿಸಲಾಗುವುದು.
ಒಟ್ಟಾರೆ ಭಕ್ತರಿಗೆ ಅನುಕೂಲವಾಗುವಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಮೂಲಕ ಮಾದರಿ ಕಾರ್ಯಕ್ರಮ ಎನ್ನುವ ಹೆಗ್ಗಳಿಕೆ ನಮ್ಮದಾಗಬೇಕು ಎಂದು ಶಶಿಕಲಾ ಜೊಲ್ಲೆ ಹೇಳಿದರು.