ಆನ್ ಲೈನ್ ಧೋಕಾ: ಲಕ್ಷಾಂತರ ರೂ. ಕಳೆದುಕೊಂಡ ಜನ; ಎಚ್ಚೆತ್ತುಕೊಳ್ಳದಿದ್ದರೆ ಅಪಾಯ

ಮೈಸೂರು: ಆನ್ ಲೈನ್ ನಲ್ಲಿ ಬರುವ ಯಾವುದೇ ಸಂದೇಶಗಳಾಗಲಿ ಅಥವಾ ಬ್ಯಾಂಕ್ ಗಳ ಬಗ್ಗೆ ಮೆಸೇಜ್ ನಂಬಿ ಮೋಸ ಹೋಗಬೇಡಿ ಎಂದು ಹೇಳುತ್ತಲೇ ಇದ್ದರೂ ಸಾರ್ವಜನಿಕರು ಮೋಸ ಹೋಗುತ್ತಲೇ ಇರುವುದು ದುರ್ದೈವದ ಸಂಗತಿ.

ಹೀಗೆ ನಗರದಲ್ಲಿ ಇತ್ತೀಚೆಗೆ ಮೂರ್ನಾಲ್ಕು ಮಂದಿ ಸಿಲುಕಿ ಲಕ್ಷಾಂತರ ರೂ ಕಳೆದುಕೊಂಡಿದ್ದಾರೆ.

ಡೇಟಿಂಗ್ ವೆಬ್ಸೈಟ್ನಿಂದ ನಂಬರ್ ಪಡೆದ ಮಹಿಳೆ ತನ್ನ ಜೊತೆ ಸಂವಾದ ನಡೆಸಿದ ವೃದ್ಧರೊಬ್ಬರನ್ನು ಬ್ಲಾಕ್ಮೇಲ್ ಮಾಡಿ ಹಣ ಪಡೆದು ವಂಚಿಸಿದ್ದಾಳೆ.

ಮಹಿಳೆ 6.50 ಲಕ್ಷ ರೂ. ಆನ್ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಲ್ಲದೆ ಮತ್ತೆ ಹಣಕ್ಕಾಗಿ ಬ್ಲಾಕ್ಮೇಲ್ ಮಾಡುತ್ತಿದ್ದಾಳೆಂದು ದೂರಲಾಗಿದೆ.

ಮೈಸೂರಿನ ಹೆಬ್ಬಾಳ 1ನೇ ಹಂತದ ನಿವಾಸಿ ಎಸ್. ಗೋಪಿನಾಥ್ (67) ವಂಚನೆಗೊಳಗಾದವರು.

ಡೇಟಿಂಗ್ ವೆಬ್ಸೈಟ್ನಿಂದ ಗೋಪಿನಾಥ್ ಮಹಿಳೆಯೊಬ್ಬಳ ನಂಬರ್ ಪಡೆದು ಆಕೆಯೊಂದಿಗೆ ಸಂವಾದಿಸಿದ್ದಾರೆ.

ಮಹಿಳೆ ಅವರನ್ನು ಪ್ರಚೋದಿಸಿ ಅವರ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡು ಬ್ಲಾಕ್ಮೇಲ್ ಮಾಡಲು ಆರಂಭಿಸಿದ್ದಾಳೆ.

ವಿಧಿಯಿಲ್ಲದೆ ಗೋಪಿನಾಥ್ ಆಕೆ ತಿಳಿಸಿದ ಖಾತೆಗಳಿಗೆ ಹಂತ ಹಂತವಾಗಿ 6.50 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ.

ಮತ್ತೆ ಮತ್ತೆ ಆಕೆ ಹಣಕ್ಕಾಗಿ ಪೀಡಿಸುತ್ತಿ ದ್ದಳಲ್ಲದೆ, ಹಣ ನೀಡದಿದ್ದರೆ ವಾಯ್ಸ್ ರೆಕಾರ್ಡ್  ವೈರಲ್ ಮಾಡುವುದಾಗಿ ಹೆದರಿಸುತ್ತಿದ್ದಾಳೆ.

ಇದೀಗ ಗೋಪಿನಾಥ್ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ವಿಜಯನಗರ 1ನೇ ಹಂತದ ನಿವಾಸಿ ಎಸ್. ಚಂದ್ರಶೇಖರ್ (65) ಅವರಿಗೆ ಮೊಬೈಲ್ ಸಂಖ್ಯೆಗೆ ಕೆವೈಸಿ ಅಪ್ಡೇಟ್ ಮಾಡುವಂತೆ ಸಂದೇಶ ರವಾನಿಸಲಾಗಿದೆ.

ಮೆಸೇಜ್ನಲ್ಲಿ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿ ಓಟಿಪಿ ನಮೂದಿಸುತ್ತಿದ್ದಂತೆಯೇ ಅವರ ಬ್ಯಾಂಕ್ ಖಾತೆಯಿಂದ 89,715 ರೂ. ಕಡಿತಗೊಂಡಿದೆ.

ಇನ್ನೊಂದು ಪ್ರಕರಣದಲ್ಲಿ ಜನತಾನಗರದ ನಿವಾಸಿಯಾಗಿರುವ ವಿದ್ಯಾರ್ಥಿನಿ ವಿ. ಸೋನಿಕಾ (19) ಅವರನ್ನು ಬ್ಲಿಂಕಿಟ್ ಆಪ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಲಾಗಿದೆ.

ಹಿನ್ನೆಲೆಯಲ್ಲಿ ಅವರು 1,19,936 ರೂ. ಹೂಡಿಕೆ ಮಾಡಿದ್ದು, ಲಾಭವಾಗಲೀ ಅಥವಾ ಹೂಡಿಕೆ ಮಾಡಿದ ಹಣವಾಗಲೀ ಬಾರದೆ ವಂಚನೆಗೊಳಗಾಗಿದ್ದಾರೆ.

ಇನ್ನು ಮುಂದಾದರೂ ಜನತೆ ಎಚ್ಚೆತ್ತುಕೊಳ್ಳಬೇಕಿದೆ.