ಬೆಂಕಿ ಹಚ್ಚುವ ಕೆಲಸ ಮಾಡಬೇಡಿ; ಮಹಾ ಸರ್ಕಾರಕ್ಕೆ ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದವನ್ನು ಇಟ್ಟುಕೊಂಡು ಬೆಂಕಿ ಹಚ್ಚುವ ಕೆಲಸವನ್ನು ಯಾರೂ ಮಾಡಬಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರ ಸರ್ಕಾರ ಯಾವಾಗಲೂ ಗಡಿ ವಿವಾದವನ್ನು ಕೆಣಕಿ ರಾಜಕೀಯ ಲಾಭ ಪಡೆದುಕೊಳ್ಳಲು ಹುನ್ನಾರ ನಡೆಸುತ್ತದೆ. ಇದಕ್ಕೆ ನಮ್ಮ ಸರ್ಕಾರ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು. 
ಗಡಿ ವಿವಾದ ಮುಗಿದ ಅಧ್ಯಾಯ.ಆದರೂ ಪದೇ ಪದೇ ಕೆಣಕಿ ಎರಡೂ ರಾಜ್ಯಗಳ ನಡುವೆ ಸೌಹಾರ್ದಯುತ ವಾತಾವರಣ ಹಾಳುಗೆಡಹುವುದು ಅಲ್ಲಿನ ಸರ್ಕಾರದ ಉದ್ದೇಶ ಎಂದು ಬೇಸರ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ, ಏಕೀಕರಣ ಹೋರಾಟ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರಿಗೆ ಪಿಂಚಣಿ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. 
ಯಾರೆಲ್ಲಾ ಹೋರಾಟ ಮಾಡಿದ್ದರೋ ಅವರೆಲ್ಲರಿಗೂ ಪಿಂಚಣಿ ನೀಡುತ್ತೇವೆ ಎಂದು ಸಿಎಂ ತಿಳಿಸಿದರು.
ಈ ಹಿಂದೆ ಮಹಾರಾಷ್ಟ್ರದ ಜೆತ್ ತಾಲ್ಲೂಕು ತೀವ್ರ ಬರಗಾಲಕ್ಕೆ ತುತ್ತಾಗಿ ಕುಡಿಯುವ ನೀರು, ಆಹಾರದ ಸಮಸ್ಯೆ ಎದುರಾಗಿತ್ತು.
ನಾವು ಮಾನವೀಯತೆಯಿಂದ ಅಲ್ಲಿನ ಜನರಿಗೆ ನೀರು, ಆಹಾರ, ಹಾಸಿಗೆ, ಹೊದಿಕೆಗಳನ್ನು ಕಳುಹಿಸಿಕೊಟ್ಟಿದ್ದೆವು.
ವ್ಯಾಜ್ಯ ಹಚ್ಚುವ ಕೆಲಸವನ್ನು ಈಗಲಾದರೂ ಮಹಾರಾಷ್ಟ್ರ ಸರ್ಕಾರ ನಿಲ್ಲಿಸಬೇಕೆಂದು ತಾಕೀತು ಮಾಡಿದರು‌
ನಮ್ಮ ಗಡಿ ಪ್ರಾಕಾರದಿಂದ ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ಕೊಡುವ ತೀರ್ಮಾನ ಮಾಡಿದ್ದೇವೆ. 
ಮಹಾರಾಷ್ಟ್ರದಲ್ಲಿದ್ದರೂ ಅಲ್ಲಿನ ಜನರೇ ಜೆತ್ ತಾಲ್ಲೂಕನ್ನು ಕರ್ನಾಟಕಕ್ಕೆ ಸೇರಿಸುವ ನಿರ್ಣಯವನ್ನೂ ಮಾಡಿದ್ದಾರೆ. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.