ಕಾಂಗ್ರೆಸ್ ನಲ್ಲಿ ಒಬ್ಬರಿಗೆ ಒಂದೇ ಟಿಕೆಟ್ : ಡಿ.ಕೆ.ಶಿ ಕಡಕ್ ಹೇಳಿಕೆ

ಬೆಂಗಳೂರು:‌ ಈ ಬಾರಿ ಚುನಾವಣೆಯಲ್ಲಿ ಯಾರೇ ಆದರೂ ಒಬ್ಬರಿಗೆ ಒಂದೇ ಟಿಕೆಟ್  ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಶುಕ್ರವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.

ಅರ್ಜಿ ಸಲ್ಲಿಕೆ ನಂತರ ಆಕಾಂಕ್ಷಿಗಳು ಸಿದ್ದರಾಮಯ್ಯ ಹಾಗೂ ನಮ್ಮ ಮನೆಗೆ ಭೇಟಿ ನೀಡುತ್ತಿರುವುದು ನಿಜ ಆದರೆ ಯಾರೇ ಆಗಲಿ ಒಬ್ಬರಿಗೆ ಒಂದೇ ಟಿಕೆಟ್ ಎಂದು ಸ್ಪಷ್ಟಪಡಿಸಿದರು.

ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಪಕ್ಷ ಮೊದಲು ಅಧಿಕಾರಕ್ಕೆ ಬರಬೇಕು ಅದೇ ನಮ್ಮ ಗುರಿ ಎಂದು ಹೇಳಿದರು.

ಅರ್ಜಿ ಸಲ್ಲಿಸುವಾಗ ಆಕಾಂಕ್ಷಿಗಳಿಂದ ದೇಣಿಗೆ ಸಂಗ್ರಹಿಸುತ್ತಿದ್ದೀರಲ್ಲ ಎಂಬ ಪ್ರಶ್ನೆಗೆ ಇದೇನು ನಮ್ಮ ಪಕ್ಷದಲ್ಲಿ ಹೊಸತಲ್ಲ. ಈ ಹಿಂದೆಯೂ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಚುನಾವಣಾ ತಯಾರಿ, ಜಿಲ್ಲೆ ಹಾಗೂ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಸೇರಿದಂತೆ ಹಲವು ವಿಚಾರವಾಗಿ ಆರ್ಥಿಕ ಶಕ್ತಿಯ ಅಗತ್ಯವಿದೆ.

ಕಚೇರಿ ನಿರ್ಮಾಣಕ್ಕೆ ಕಾರ್ಯಕರ್ತರು ಆರ್ಥಿಕ ನೆರವು ಕೇಳಿದಾಗ ನಾವು ಹಣ ಸಹಾಯ ಮಾಡುತ್ತೇವೆ. ಕಾರ್ಯಕರ್ತರಿಗೆ ತೊಂದರೆ ಆದಾಗ ಅವರಿಗೆ ಸಹಾಯ ಮಾಡಲು ಹಣದ ಅಗತ್ಯವಿರುತ್ತದೆ. ಹೀಗಾಗಿ ದೇಣಿಗೆಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಡಿಕೆಶಿ ‌ತಿಳಿಸಿದರು.

ಪಕ್ಷ ಅಧಿಕಾರಕ್ಕೆ ಬಂದಾಗ ಎಲ್ಲರಿಗೂ ಅಧಿಕಾರ ಸಿಗುತ್ತದೆ. ಎಲ್ಲರಿಗೂ ಅವರದೇ ಆದ ಶಕ್ತಿ ಇರುತ್ತದೆ. ಯಾರ ಶಕ್ತಿ ಎಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.