ಸೆ. 14ರಿಂದ ಅ. 1ರವರೆಗೆ ಅಧಿವೇಶನ ನಡೆಸಲು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸ್ಸು

ನವದೆಹಲಿ: ಒಂದು ಪ್ರಮುಖ ಬೆಳವಣಿಗೆಯಲ್ಲಿ, ಸಂಸತ್ತಿನ ಮಾನ್ಸೂನ್ ಅಧಿವೇಶನವನ್ನು ಸೆ. 14ರಿಂದ ಅ. 1ರ ವರೆಗೆ ನಡೆಸಬೇಕೆಂದು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸ್ಸು ಮಾಡಿದೆ ಎಂದು ತಿಳಿದುಬಂದಿದೆ.
ಸಮಿತಿಯ ಶಿಫಾರಸ್ಸಿನ ಪ್ರಕಾರ, ಮಾನ್ಸೂನ್ ಅಧಿವೇಶನವು ಒಟ್ಟು 18 ಕಲಾಪಗಳನ್ನು ಒಳಗೊಂಡಿರುತ್ತದೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮೊದಲ ಬಾರಿಗೆ ಹಲವು ವಿಶೇಷ ಕ್ರಮಗಳನ್ನು ಜಾರಿಗೆ ತರಲು ಸಂಸತ್ತಿನಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಈ ಕ್ರಮಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳ ಸಂದರ್ಭದಲ್ಲಿ ಸಾಮಾಜಿಕ ಅಂತರದ ರೂಢಿಗಳನ್ನು ಪಾಲಿಸುವುದು ಸೇರಿದೆ ಮತ್ತು ಇನ್ನೂ ಅನೇಕ ಉಪಕ್ರಮಗಳನ್ನು ಈ ವೇಳೆ ಅನುಸರಿಸಲಾಗುತ್ತದೆ.
ಸದಸ್ಯರಿಗೆ ಸ್ಥಳಾವಕಾಶ ಕಲ್ಪಿಸಲು ಎರಡು ಸದನಗಳ ಕೋಣೆಗಳು ಮತ್ತು ಗ್ಯಾಲರಿಗಳನ್ನು ಬಳಕೆ ಮಾಡಲಾಗುತ್ತಿದೆ.
ರಾಜ್ಯಸಭೆಯ ಕಲಾಪದ ಸಂದರ್ಭದಲ್ಲಿ, 60 ಸದಸ್ಯರನ್ನು ಸದನದ ಕೊಠಡಿಯಲ್ಲಿ ಕೂರಿಸಲಾಗುವುದು, 51 ಮಂದಿ ಅದರ ಗ್ಯಾಲರಿಗಳಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ಉಳಿದ 132 ಮಂದಿ ಲೋಕಸಭೆಯ ಕೊಠಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಲೋಕಸಭಾ ಸಭೆಗಳಿಗೂ ಇದೇ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
1952ರ ನಂತರ ಇದೇ ಮೊದಲ ಬಾರಿಗೆ ಸಂಸತ್ತಿನ ಅಧಿವೇಶನ ನಡೆಸಲು ಇಂತಹ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದಲ್ಲದೆ, ಒಂದು ಸದನ ಬೆಳಗ್ಗಿನ ಸಮಯದಲ್ಲಿ ಕಲನಡೆಸುವುದು, ಇನ್ನೊಂದು ಸಂಜೆ ಕಲಾಪ ನಡೆಸುವುದು ಇದೇ ಮೊದಲು.