ಚಿಕ್ಕಬಳ್ಳಾಪುರ: ಜನತೆ ಸ್ವಂತ ಶಕ್ತಿಯ ಮೇಲೆ ಐದು ವರ್ಷಗಳ ಆಡಳಿತ ನಡೆಸಲು ಆಶೀರ್ವಾದ ಮಾಡಿದರೆ ಅಂದಾಜು 1.25 ಲಕ್ಷ ಕೋಟಿ ರೂಪಾಯಿ ಪಂಚರತ್ನ ಯೋಜನೆ ಜಾರಿಗೊಳಿಸುವುದಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಂದಿ ಗ್ರಾಮದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಐದು ವರ್ಷದಲ್ಲಿ ಪಂಚರತ್ನ ಯೋಜನೆ ಜಾರಿಗೊಳಿಸದಿದ್ದರೆ ಜಾತ್ಯಾತೀತ ಜನತಾದಳವನ್ನು ವಿಸರ್ಜಿಸಲಾಗುವುದು ಎಂದು ತಿಳಿಸಿದರು.
ಬಯಲು ಸೀಮೆ ಜಿಲ್ಲೆಗಳಿಗೆ ಶುದ್ಧ ನೀರು ಒದಗಿಸಿಕೊಡುವ ಹೆಚ್. ಎನ್.ವ್ಯಾಲಿ ಮತ್ತು ಕೆ.ಸಿ. ವ್ಯಾಲಿ ಎರಡು ಯೋಜನೆಗಳು ದೋಷಪೂರಿತವಾಗಿವೆ.
ಈ ಯೋಜನೆಗಳಲ್ಲಿ ಹಣ ಹೊಡೆದು ರಾಜಕಾರಣಿಗಳು ಶ್ರೀಮಂತರಾಗಿದ್ದಾರೆಯೇ ಹೊರತು, ಜನಸಾಮಾನ್ಯರಿಗೆ ಶುದ್ಧವಾದ ನೀರು ದೊರೆತಿಲ್ಲ ಎಂದು ಗರಂ ಆದರು ಎಚ್ ಡಿ ಕೆ.
ಎತ್ತಿನಹೊಳೆ ಯೋಜನೆಗೆ ಈಗಾಗಲೇ 13 ಸಾವಿರ ಕೋಟಿ ರೂ. ವೆಚ್ಚವಾಗಿದೆ. ಈ ಯೋಜನೆ ಪೂರ್ಣಗೊಳಿಸಲು ಈಗಿನ ಸರ್ಕಾರ 24,000 ಕೋಟಿ ರೂ ಹೆಚ್ಚುವರಿ ವೆಚ್ಚಕ್ಕೆ ಅನುಮೋದನೆ ಪಡೆದುಕೊಂಡಿದೆ.
ಈ ಯೋಜನೆ ಕೂಡಾ ಕೆಲ ರಾಜಕಾರಣಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಜೇಬು ತುಂಬಿಸಿಕೊಳ್ಳಲು ದಾರಿ ಎಂದು ಆರೋಪಿಸಿದರು.
ನನಗೆ ಯಾವುದೇ ಜಾತಿ ಭೇದ ಇಲ್ಲ. ನನಗೆ ಸಮಗ್ರ ಕರ್ನಾಟಕದ ಅಭಿವೃದ್ಧಿ ಹಾಗೂ ಅನ್ನದಾತರ ಸಮಸ್ಯೆಗಳ ನಿವಾರಣೆಯೇ ಮುಖ್ಯ ಗುರಿ ಎಂದು ಹೇಳಿದರು.