ಚಿಕ್ಕಮಗಳೂರು: ನಿಮ್ಮ ಹೂವಿನ ಹಾರ, ಜೈಕಾರಕ್ಕಾಗಿ ನಾನು ಬರಲಿಲ್ಲ, ಚುನಾವಣೆಯಲ್ಲಿ ಮೂಡಿಗೆರೆಯಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸಿದರೆ ಇದೆಲ್ಲವೂ ಸಿಕ್ಕಿದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮೂಡಿಗೆರೆಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು. ಯಾರೇ ಅಭ್ಯರ್ಥಿಯಾದರೂ ನಿಜವಾದ ಅಭ್ಯರ್ಥಿಗಳು ನಾನು, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ. ಹಾಗಾಗಿ ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡಿದರು.
ಆದರೆ ಮೋದಿ ಅವರ ಸರ್ಕಾರ ಈ ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಜನರಲ್ಲಿ ಧರ್ಮ, ದ್ವೇಷದ ವಿಷ ಬೀಜ ಬಿತ್ತುತ್ತಿದ್ದಾರೆ. ಅವರು ಭಾವನೆಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮನಮೋಹನ್ ಸಿಂಗ್ ಅವರು ತಮ್ಮ ಅವಧಿಯಲ್ಲಿ ಜನಪರ ಕಾಯ್ದೆ ಹಾಗೂ ಯೋಜನೆಗಳನ್ನು ಜಾರಿಗೆ ತಂದರು. ಆಹಾರ ಭದ್ರತೆ, ಶಿಕ್ಷಣ ಹಕ್ಕು, ಉದ್ಯೋಗ ಭದ್ರತೆ, ಆರೋಗ್ಯ ಸೌಲಭ್ಯ ಸೇರಿದಂತೆ ಹಲವು ಯೋಜನೆ ತಂದರು.
ಇಂದಿರಾ ಗಾಂಧಿ, ನೆಹರೂ, ಲಾಲ್ ಬಹಾದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿ ಆಗಿದ್ದಾಗ ದೇಶದ ಪ್ರಗತಿಗೆ ಪೂರಕವಾದ ಯೋಜನೆ ರೂಪಿಸಲಾಗಿತ್ತು. ಈ ಇತಿಹಾಸ ತಿರುಚಲು ಸಾಧ್ಯವಿಲ್ಲ ಎಂದು ಡಿಕೆಶಿ ಹೇಳಿದರು.
ಮಲೆನಾಡು ಹಾಗೂ ಕರಾವಳಿ ಪ್ರದೇಶಕ್ಕೆ ಕಾಂಗ್ರೆಸ್ ಪಕ್ಷ ಪ್ರತ್ಯೇಕ ಪ್ರಣಾಳಿಕೆ ನೀಡುತ್ತದೆ.
ಬಿಜೆಪಿ ಸರ್ಕಾರ ಕಳೆದ ಬಾರಿ ಚುನಾವಣೆಯಲ್ಲಿ ಕೊಟ್ಟ ಪ್ರಣಾಳಿಕೆ ನೋಡಿ.
ಒಂದು ತಿಂಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 1 ಲಕ್ಷದವರೆಗೆ ಸಾಲ ಮನ್ನಾ ಮಾಡುತ್ತೇವೆ ಎಂದು ತಿಳಿಸಿದರು. ಸಾಲ ಮನ್ನಾ ಆಯಿತೇ? ನಿಮ್ಮ ಖಾತೆಗಳಿಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು ನಿಮ್ಮ ಖಾತೆಗೆ ಹಣ ಬಂತಾ.
ಕೇವಲ ಸುಳ್ಳಿನ ಕಂತೆ ಮೇಲೆ ರಾಜಕೀಯ ಮಾಡುತ್ತಾರೆ. ಅವರು ಕೊಟ್ಟ 600 ಭರವಸೆಗಳಲ್ಲಿ 550 ಭರವಸೆ ಈಡೇರಿಸಿಲ್ಲ. ಈ ಬಗ್ಗೆ ದಿನನಿತ್ಯ ಪ್ರಶ್ನೆ ಕೇಳಿದರೂ ಯಾವುದೇ ಉತ್ತರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಅಕ್ಕಿ ಕೊಟ್ಟಿದೆ. ಹಲವು ಯೋಜನೆ ಜಾರಿಗೆ ತಂದಿದೆ. ಇಂದಿರಾ ಗಾಂಧಿ ಅವರ ಹೆಸರಲ್ಲಿ ಕ್ಯಾಂಟೀನ್ ಆರಂಭಿಸಿದೆವು. ಆಗ ಪಕ್ಷ ನೋಡಿದೆವಾ, ರೈತರ ಬದುಕು, ವಿದ್ಯಾರ್ಥಿ, ಕೈಗಾರಿಕೆ ವೃದ್ಧಿಗೆ ಶ್ರಮ ವಹಿಸಿದ್ದೆವು ಎಂದು ತಿಳಿಸಿದರು.
ಈ ಡಿ.ಕೆ. ಶಿವಕುಮಾರ್ ಅವರಿಗೆ ಕಿರುಕುಳ ಕೊಟ್ಟಂತೆ ಬೇರೆ ನಾಯಕರಿಗೆ ಕಿರುಕುಳ ನೀಡುತ್ತೀರಾ, ಬಿಜೆಪಿಯ ಬೆದರಿಕೆಗೆ ನಮ್ನ ಯಾವುದೇ ನಾಯಕರು ಹೆದರುವುದಿಲ್ಲ ಎಂದರು.
ನಂಬಿಕೆಗಿಂತ ಉತ್ತಮ ಗುಣ ಬೇರೊಂದಿಲ್ಲ. ನನಗೆ ನಿಮ್ಮ ಮೇಲೆ ನಂಬಿಕೆ ಇದೆ. ಹೀಗಾಗಿ ನಾನು ಮೂಡಿಗೆರೆಗೆ ಬಂದು ನಮ್ಮ ಅಭ್ಯರ್ಥಿ ಗೆಲ್ಲಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ. ನಿಮ್ಮಗಳ ಜತೆ ನಾವಿದ್ದೇವೆ, ನಿಮ್ಮ ಹೋರಾಟಕ್ಕೆ ನಾವು ಶಕ್ತಿ ನೀಡುತ್ತೇವೆ.
ನಿಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಪಕ್ಕಕ್ಕೆ ಇಡಿ. ನಿಮ್ಮ ವೈಯಕ್ತಿಕ ವಿಚಾರಕ್ಕೆ ಕಾರ್ಯಕರ್ತರನ್ನು ಬಲಿ ನೀಡುವುದು ಬೇಡ. ನಾವು ತ್ಯಾಗದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನಮ್ಮಲ್ಲಿ ಸಮಸ್ಯೆ ಇರಬಹುದು. ಎಲ್ಲವೂ ಸರಿ ಎಂದು. ಹೇಳುವುದಿಲ್ಲ. ನಾವು ತಪ್ಪು ಮಾಡಿದ್ದೇವೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ.
ನಿಮ್ಮ ಮನೆ ಬಾಗಿಲಿಗೆ ಅಧಿಕಾರ ಬರುತ್ತಿದೆ. ನಾನು ಇಡೀ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಅವರು ಪ್ರವಾಸ ಮಾಡಲಿದ್ದಾರೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಡಿಕೆಶಿ ಕರೆ ನೀಡಿದರು.